×
Ad

ಬಳ್ಕುಂಜೆ ಗ್ರಾ.ಪಂ. ನಿರ್ಲಕ್ಷ್ಯ ಆರೋಪ; ಪಿಲಿಬೊಟ್ಟು ಗ್ರಾಮದ 28 ಮನೆಗಳು ಜಲಾವೃತ

Update: 2022-07-08 22:59 IST

ಕಿನ್ನಿಗೋಳಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಬೊಟ್ಟು ಗ್ರಾಮ ಸಂಪೂರ್ಣ ಜಲಾವೃತವಾಗಿದೆ.

ಈ ಗ್ರಾಮದಲ್ಲಿ ಸುಮಾರು 25 ರಿಂದ 28 ಮನೆಗಳಿದ್ದು ಸುಮಾರು 150 ಮಂದಿ ವಾಸವಾಗಿದ್ದಾರೆ. ಈ ಪೈಕಿ ಸಣ್ಣ ಮಕ್ಕಳು, ವೃದ್ಧರೂ ಇದ್ದು, ಜಲಾವೃತದಿಂದ ಕಂಗಲಾಗಿದ್ದಾರೆ.

ಗ್ರಾಮದ ಈ ಪರಿಸ್ಥಿತಿಗೆ ಬಳ್ಕುಂಜೆ ಗ್ರಾಮ ಪಂಚಾಯತ್ ನೇರ ಹೊಣೆ ಎಂದು ಆರೋಪಿಸುವ ಗ್ರಾಮಸ್ಥರು, ನಾಲ್ಕು ದಿನಗಳಿಂದ ಜಲ ದಿಗ್ಬಂಧನಕ್ಕೆ ಒಳಗಾಗಿದ್ದರೂ ಗ್ರಾಮ ಪಂಚಾಯತ್ ಸಂಬಂಧಿಸಿದವರು ನಮ್ಮ ಪ್ರದೇಶಕ್ಕೆ ಭೇಟಿಯೂ ನೀಡಿಲ್ಲ, ಕನಿಷ್ಠ ಸಂಪರ್ಕಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿಯೂ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಗ್ರಾಮದಲ್ಲಿ ಪ್ರತೀ ಮಳೆಗಾಲದಲ್ಲೂ ಈ ಪರಿಸ್ಥಿತಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಈ ಬಾರಿ ಗ್ರಾಮ ಪಂಚಾಯತ್ ನ ಅವೈಜ್ಞಾನಿಕ ಕಾಮಗಾರಿಗಳ‌ ಪರಿಣಾಮ ನೀರು ಹರಿದು ಹೋಗದೆ ಈ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಸಮೀಪದ ಶಾಂಭವಿ ನದಿಗೆ ಎರಡು ಆನೆ‌ಕಟ್ಟೆಗಳನ್ನು ನಿರ್ಮಿಸಲಾಗಿದೆ. ಅದರ‌ ಸರಿಯಾದ ನಿರ್ವಹಣೆ‌‌ ಇಲ್ಲದ ಕಾರಣ ಆನೆಕಟ್ಟೆಯಲ್ಲಿ ಹೂಳು ತುಂಬಿಕೊಂಡಿದೆ.‌ ಹೀಗಾಗಿ ನೀರು ಸರಾಗವಾಗಿ ಹರಿದು ಹೋಗಲಾಗದೇ ಸಂಪೂರ್ಣ ಗ್ರಾಮವೇ ಮುಳುಗುವಂತಾಗಿದೆ‌ ಎಂದು ಗ್ರಾಮಸ್ಥರಾದ ಲಕ್ಷ್ಮಣ ಎಂಬವರು ದೂರಿದ್ದಾರೆ.

ನಾವು ಮನೆಯಿಂದ ಹೊರ ಬಾರದೆ 5-6 ದಿನಗಳಾಗಿವೆ. ಮನೆಯಲ್ಲಿ ಸಣ್ಣ ಪುಟ್ಟ ಮಕ್ಕಳು, ವಯಸ್ಸಾದವರು ಇದ್ದಾರೆ. ನಮಗೆ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಯಾರೂ ಕೇಳುವವರಿಲ್ಲ. ಗ್ರಾಮ‌ ಪಂಚಾಯತ್ ಸಂಬಂಧಿಸಿದ ಯಾರೊಬ್ಬರೂ ಸೌಜನ್ಯಕ್ಕೂ ನಮ್ಮ ಬಳಿಗೆ ಭೇಟಿ ನೀಡಿಲ್ಲ. ಗ್ರಾಮದ ಅನೇಕರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಕೃಷಿ ಭೂಮಿಯಲ್ಲಿ ನೀರು ನಿಂತು ಬಿತ್ತಿದ ಬೀಜಗಳು ಹಾಗೂ ಮೊಳಕೆ ಹೊಡೆದಿರುವ ಸಸಿಗಳು ನೀರು ಪಾಲಾಗಿವೆ. ಕೆಲವರು ಕೆಲಸಕ್ಕೆ ಹೋಗಿ ತಮ್ಮ ಕುಟುಂಬ ಸಲಹುವವರಿದ್ದಾರೆ ಅವರಿಗೂ ಕೆಲಸಕ್ಕೆ ಹೊಗಲು ಸಾಧ್ಯವಾಗುತ್ತಿಲ್ಲ.‌ ಅಲ್ಲದೆ ಯಾವಾಗ ಮಳೆ ತೀವೃತೆ ಪಡೆದು ಕೊಳ್ಳುತ್ತದೇಯೋ ಮನೆ ಮಠ ನೀರು ಪಾಲಾಗುವ ಭಯದಿಂದ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರಾದ ವಿಜಯ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಪ್ರತೀ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ಇದ್ದು, ಗ್ರಾಮಸ್ತರಿಗೆ ಆರೋಗ್ಯ ಸೇರಿದಂತೆ ಇತರ ತುರ್ತು ಪರಿಸ್ಥಿತಿಗೆ ಗ್ರಾಮದಲ್ಲಿರುವ ಎರಡು ಖಾಸಗಿ ದೋಣಿಗಳಷ್ಟೇ ಆದಾರವಾಗಿದೆ. ಅವರ ಒಂದು ವೇಳೆ ಗಾಳಿ ಮಳೆ ಜೋರಾಗಿ ಸುರಿಯುತ್ತಿದ್ದರೆ, ಅದರಲ್ಲೂ ಸಾಗಿಸುವುದು ಕಷ್ಟವಾಗಲಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಪಾರ ಕೃಷಿ ಹಾನಿ

ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಬೊಟ್ಟು ಗ್ರಾಮದಲ್ಲಿ ಹೆಚ್ಚಿನ ಮನೆಗಳಲ್ಲಿ ಕೃಷಿಯೇ ಮೂಲ‌ ಆಧಾಯವಾಗಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಭತ್ತ ಹಾಗೂ ಅಲ್ಪ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗಿದೆ. ಇಡೀ ಗ್ರಾಮವೇ ಜಲಾವೃತವಾಗಿ ಇರುವ ಪರಿಣಾಮ ಕೃಷಿಗೆ ಸಂಪೂರ್ಣ ಹಾನಿ ಸಂಭವಿಸಿದೆ. ಹಾನಿಗೀಡಾದ ಬೆಲೆಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಗ್ರಾಮದ ಕೃಷಿಕರು ಜಿಲ್ಲಾಳಿತವನ್ನು ಆಗ್ರಹಿಸಿದ್ದಾರೆ.

"ಪಿಲಿಬೊಟ್ಟು ಗ್ರಾಮಸ್ಥರನ್ನು ರಾತ್ರಿಯ ವೇಳೆ ಮನೆಯಿಂದ ಸ್ಥಳಾಂತರಗೊಳ್ಳಲು ವಿನಂತಿಸಲಾಗುತ್ತಿದೆ. ಆದರೆ, ಯಾರೂ ಬರಲು ಒಪ್ಪುತ್ತಿಲ್ಲ. ಸದ್ಯ ಗ್ರಾಮಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ".

- ಮಮತಾ ಡಿ. ಪೂಂಜಾ,
ಬಳ್ಕುಂಜೆ ಗ್ರಾಮ ಪಮಚಾಯತ್ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News