ಬಳ್ಕುಂಜೆ: ಜಲದಿಗ್ಬಂಧನಕ್ಕೆ ಒಳಗಾಗಿದ್ದ ಸುಮಾರು 28 ಕುಟುಂಬಗಳಿಗೆ ತಹಶೀಲ್ದಾರ್ ನೇತೃತ್ವದ ತಂಡದಿಂದ ಸಹಾಯ ಹಸ್ತ

Update: 2022-07-09 17:03 GMT

ಕಿನ್ನಿಗೋಳಿ: ಇಲ್ಲಿನ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಬೊಟ್ಟು ಗ್ರಾಮದಲ್ಲಿ ಜಲ ದಿಗ್ಬಂಧನಕ್ಕೆ ಒಳಗಾಗಿದ್ದ ಸುಮಾರು 28 ಕುಟುಂಬಗಳಿಗೆ ಮುಲ್ಕಿ ತಹಶೀಲ್ದಾರ್ ನೇತೃತ್ವದ ತಂಡ ಸಹಾಯ ಹಸ್ತ ಚಾಚಿದೆ.

ಈ ಕುರಿತು ಬೆಳಕು ಚೆಲ್ಲಿದ ವಾರ್ತಾಭಾರತಿ ದೈನಿಕ "ಪಿಲಿಬೊಟ್ಟು ಗ್ರಾಮದ 28 ಮನೆಗಳಿಗೆ ಜಲದಿಗ್ಬಂಧನ" ಎಂಬ ತಲೆ‌ ಬರಹದಡಿ ಶನಿವಾರ ಸುವಿಸ್ತಾರ ಸುದ್ದಿ ಪ್ರಕಟಿಸಿತ್ತು.

ಈ ಬಗ್ಗೆ ಶನಿವಾರ ಸಂಜೆ ವಾರ್ತಾಭಾರತಿಯೊಂದಿಗೆ ಮಾತನಾಡಿದ ಮುಲ್ಕಿ ತಹಶೀಲ್ದಾರ್ ಗುರುಪ್ರಸಾದ್ ಅವರು, ಈಗಾಗಲೇ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಸ್ಥಳದಲ್ಲಿ ಎನ್‌ಡಿ ಆರ್‌ಎಫ್  ಹಾಗೂ ಹೋಂ ಗಾರ್ಡ್ ಗಳನ್ನೊಳಗೊಂಡ ಸನ್ನದ್ಧ ಸ್ಥಿತಿಯಲ್ಲಿ ಇರುವ ತಂಡವನ್ನು ನಿಯೋಜಿಸಲಾಗಿದೆ. ಸಮೀಪದ ನಡುಗೋಡು ಮತ್ತು ಬಳ್ಕುಂಜೆಯಲ್ಲಿ ಸಂತ್ರಸ್ತರಿಗೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಲ್ಕಿ ತಹಶೀಲ್ದಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಹಲವರು ಪಿಲಿಬೊಟ್ಟು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ನೆಂಟರ ಮನೆಗೆ ಸ್ಥಳಾಂತರಗೊಳ್ಳಲು ಹೇಳಿದ್ದಾರೆ. ಸ್ಥಳಾಂತರಗೊಳ್ಳಲು ಸಿದ್ಧರಿಲ್ಲದ ಕಾರಣ ತಹಶೀಲ್ದಾರ್ ಸೇರಿದಂತೆ 2- 3 ಮಂದಿಯ ಫೋನ್ ನಂಬರ್ ನೀಡಿದ್ದು, ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಸಂಪರ್ಕಿಸುವಂತೆ ತಿಳಿಸಿದ್ದಾರೆ ಎಂದು ಗ್ರಾಮಸ್ಥರಾದ ವಿಜಯ ಅಮೀನ್ ಅವರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

ಏರಿಕೆಯಾಗುತ್ತಿರುವ ನೀರಿನ ಮಟ್ಟ

ಕಳೆದ ಹಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪಿಲಿಬೊಟ್ಟು ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಜಲ ದಿಗ್ಬಂಧನಕ್ಕೆ ಒಳಗಾಗಿದ್ದರು. ಈ ಮಧ್ಯೆ ಮಳೆ ಬಿಡುವು ನೀಡದ ಪರಿಣಾಮ ನೀರಿನ ಮಟ್ಟ ಹೆಚ್ಚುತ್ತಿದ್ದು ಯಾವುದೇ ಸಂದರ್ಭದಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News