×
Ad

ಶಿಕ್ಷಣ ಸಚಿವರ ನಿರ್ಧಾರ ಸ್ವಾಗತಾರ್ಹ: ಪದ್ಮರಾಜ್

Update: 2022-07-11 22:48 IST

ಮಂಗಳೂರು : ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯಭಾಗವನ್ನು ಸಮಾಜ ವಿಜ್ಞಾನದಲ್ಲೇ ಮರು ಸೇರ್ಪಡೆಗೆ ಆದೇಶಿಸುವಂತೆ ಶಿಕ್ಷಣ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಪಠ್ಯ ಸೇರ್ಪಡೆಗೆ ಶಿಕ್ಷಣ ಸಚಿವರ ಮನವೊಲಿಸಿದ ಸಚಿವ ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕುದ್ರೋಳಿ ಶ್ರಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

ಆದಷ್ಟು ಶೀಘ್ರದಲ್ಲೇ ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಬೇಕು. ಅಧಿಕೃತ ಆದೇಶವಾದ ಕೂಡಲೇ ಈಗಾಗಲೇ ಕರೆ ನೀಡಲಾದ ಪ್ರತಿಭಟನಾ ಸಭೆಯನ್ನು ಕೈಬಿಡುವ ಬಗ್ಗೆ ನಿರ್ಧರಿಸಲಾಗುವುದು. ಗುರುಗಳ ಪಠ್ಯ ವಿಚಾರದಲ್ಲಿ ಸತ್ಯಾಂಶವನ್ನು ಸಮಾಜದ ಮುಂದಿಟ್ಟ ಮಾಧ್ಯಮಗಳಿಗೆ, ಸಮಾಜ ವಿಜ್ಞಾನದಲ್ಲಿ ಮರು ಸೇರ್ಪಡೆಗೊಳಿಸಲು ಒತ್ತಾಯಿಸಿದ ಗುರುಗಳ ಅನುಯಾಯಿಗಳಿಗೆ, ಹೋರಾಟವನ್ನು ಬೆಂಬಲಿಸಿದ ಸಮಾಜದ ಸಂಘಟನೆಗಳು, ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಹಾಗೂ ಗಾಳಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಮಸ್ತ ಸಮಾಜ ಬಾಂಧವರಿಗೆ ಹೃದಯಪೂರ್ವಕ ಧನ್ಯವಾದಗಳು. ಇದೊಂದು ಸಂಘರ್ಷ ರಹಿತ ಹೋರಾಟಕ್ಕೆ ಸಂದ ಜಯವಾಗಿದೆ. ಮುಂದೆಯೂ ಗುರುಗಳ ತತ್ವದಂತೆ ಅನ್ಯಾಯದ ವಿರುದ್ಧ ಯಾವುದೇ ರಾಜಕೀಯ, ಸಂಘರ್ಷ ಇಲ್ಲದೆ ಹೋರಾಡೋಣ ಎಂದು ಪದ್ಮರಾಜ್  ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News