ಭಾರೀ ಮಳೆಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಸಮೀಕ್ಷೆ ನಡೆಸಲಾಗುವುದು: ಸಿಎಂ ಬೊಮ್ಮಾಯಿ

Update: 2022-07-13 05:39 GMT

ಉಡುಪಿ: ಇತ್ತೀಚೆಗಿನ ಭಾರೀ ಮಳೆಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆಗಿರುವ ಅಪಾರ ಹಾನಿಯ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ಮಣಿಪಾಲದ ಜಿ.ಪಂ. ಸಭಾಂಗಣದಲ್ಲಿ ನಡೆಸಿದ್ದಾರೆ.

ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಭೂಕಂಪನ, ಭೂಕುಸಿತ ಹಾಗೂ ಮಳೆಯಿಂದ ಹಾನಿಯಾಗಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ನಿನ್ನೆ ಭೇಟಿ ನೀಡಿದ್ದು ಇಂದು ಉಡುಪಿ ಜಿಲ್ಲೆಯಲ್ಲಿ ಸಮುದ್ರ ಕೊರೆತಕ್ಕೊಳಗಾದ ಮರವಂತೆ ಮತ್ತು ಮೂಳೂರಿಗೆ ಭೇಟಿ ನೀಡುವುದಾಗಿ ತಿಳಿಸಿದರು.

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ, ಭೂಕಂಪನ ಮತ್ತು ಭೂಕುಸಿತವಾದ ಸ್ಥಳಗಳ ಪರಿಶೀಲನೆ ನಡೆಸಿದ್ದೇನೆ. 4 ಸಂಸ್ಥೆಗಳಿಂದ ಅಧ್ಯಯನ ಮಾಡಲು ಸೂಚನೆ ಕೊಟ್ಟಿದ್ದೇನೆ. ಕಡಲು ಕೊರೆತ ತಡೆಯಲು ಹೊಸ ತಂತ್ರಜ್ಞಾನದ ಅಳವಡಿಸಲು ತೀರ್ಮಾನಿಸಲಾಗುವುದು.

ಉಡುಪಿಯಲ್ಲಿ ಮೂರು ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಮೂರು ಜಿಲ್ಲೆಯ ಹಾನಿಯ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತದೆ. ತುರ್ತು ಮತ್ತು ದೀರ್ಘಕಾಲೀನ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ನಡೆಸಲಾಗುವುದು. ಬೈಂದೂರು ತಾಲೂಕು ಮತ್ತು ಕಾಪು ತಾಲೂಕಿಗೆ ಭೇಟಿ ಕೊಡುತ್ತೇನೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಹತ್ತು ದಿನ ಬಿಟ್ಟು ಭೇಟಿ ನೀಡಲಾಗುವುದು. ನೆರವು ಮತ್ತು ಅಭಿವೃದ್ಧಿ ಕೆಲಸದ ಬಗ್ಗೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ಸಭೆಯಲ್ಲಿ ಸಚಿವ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವ ಅಶೋಕ್, ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಮಟ್ಟಾರು ರತ್ನಾಕರ ಹೆಗಡೆ, ಶಾಸಕ ಸುಕುಮಾರ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News