ಶ್ರೀಲಂಕಾ ತೊರೆಯುವುದಕ್ಕೆ ಮಾಜಿ ಪ್ರಧಾನಿ ಮಹಿಂದಾಗೆ ನಿರ್ಬಂಧ

Update: 2022-07-15 16:23 GMT

ಕೊಲಂಬೊ, ಜು.16: ಶ್ರೀಲಂಕಾದ ಅತ್ಯಂತ ಪ್ರಭಾವೀ ರಾಜಕೀಯ ಕುಟುಂಬ ಎಂಬ ಹೆಗ್ಗಳಿಕೆ ಹೊಂದಿದ್ದ ರಾಜಪಕ್ಸ ಕುಟುಂಬಕ್ಕೆ ಈಗ ಒಂದರ ಹಿಂದೆ ಒಂದರಂತೆ ಆಘಾತ ಎದುರಾಗುತ್ತಿದೆ. ಅಧ್ಯಕ್ಷರಾಗಿದ್ದ ಗೊತಬಯ ಹುದ್ದೆಗೆ ರಾಜೀನಾಮೆಯನ್ನು ಅಧಿಕೃತವಾಗಿ ಪ್ರಕಟಿಸಿದ ಬೆನ್ನಲ್ಲೇ, ದೇಶ ಬಿಟ್ಟು ತೆರಳದಂತೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಮಾಜಿ ವಿತ್ತ ಸಚಿವ ಬಾಸಿಲ್ ರಾಜಪಕ್ಸಗೆ ಅಲ್ಲಿನ ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ. 

ಆದರೆ ಗೊತಬಯ ರಾಜಪಕ್ಸ ಈಗಾಗಲೇ ದೇಶದಿಂದ ಪಲಾಯನ ಮಾಡಿ ಮಾಲ್ದೀವ್ಸ್ ತಲುಪಿದ್ದು ಅಲ್ಲಿಂದ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. 2 ತಿಂಗಳ ಹಿಂದೆ ಅಧ್ಯಕ್ಷ ಗೊತಬಯ ರಾಜೀನಾಮೆಗೆ ಆಗ್ರಹಿಸಿ ಅವರ ಕಚೇರಿಯೆದುರು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ, ಆಗ ಪ್ರಧಾನಿಯಾಗಿದ್ದ ಮಹಿಂದಾ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು. 
ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಮಹಿಂದಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಮಧ್ಯೆ, ಪ್ರತಿಭಟನಾಕಾರರು ಅಧ್ಯಕ್ಷರ ಸರಕಾರಿ ನಿವಾಸದಿಂದ ಹಿಂದಕ್ಕೆ ಸರಿದ ಬಳಿಕ ವಿಧಿವಿಜ್ಞಾನ ತಂಡವು ಅಲ್ಲಿಗೆ ಆಗಮಿಸಿ ಬೆರಳಚ್ಚು ಗುರುತುಗಳನ್ನು ಸಂಗ್ರಹಿಸಿದೆ ಮತ್ತು ನಿವಾಸಕ್ಕೆ ಆಗಿರುವ ಹಾನಿಯ ಲೆಕ್ಕಾಚಾರ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

 ಅಧ್ಯಕ್ಷರಿಗೆ ‘ಘನವೆತ್ತ’ ಬಿರುದು ನಿಷೇಧಿಸಿದ ವಿಕ್ರಮಸಿಂಘೆ

ಅಧ್ಯಕ್ಷರನ್ನು ಉಲ್ಲೇಖಿಸಿ ಬರೆಯುವಾಗ ಅಥವಾ ಮಾತನಾಡುವಾಗ ‘ಘನವೆತ್ತ ಅಧ್ಯಕ್ಷರು’ ಎಂಬ ಬಿರುದನ್ನು ಬಳಸುವುದನ್ನು ನಿಷೇಧಿಸುವುದಾಗಿ ಹಂಗಾಮಿ ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಘೋಷಿಸಿದ್ದಾರೆ. ಜತೆಗೆ ಅಧ್ಯಕ್ಷರ ಧ್ವಜವನ್ನೂ ನಿಷೇಧಿಸಲಾಗಿದೆ. ವ್ಯಕ್ತಿಗಳನ್ನು ರಕ್ಷಿಸುವ ಬದಲು ದೇಶವನ್ನು ರಕ್ಷಿಸಬೇಕಿದೆ. ದೇಶಕ್ಕೆ ಒಂದೇ ಧ್ವಜ, ಅದು ರಾಷ್ಟ್ರಧ್ವಜ ಇದ್ದರೆ ಸಾಕು. ಅಧ್ಯಕ್ಷರಿಗೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲ ಎಂದ ಅವರು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದರು.

ರಾಜೀನಾಮೆ ಇ-ಮೇಲ್ ಮಾಡಿದ ಗೊತಬಯ
  
 ಕಳೆದ ಶನಿವಾರ ದೇಶದಿಂದ ಪಲಾಯನ ಮಾಡಿದ್ದ ಅಧ್ಯಕ್ಷ ಗೊತಬಯ ರಾಜಪಕ್ಸ ತಮ್ಮ ರಾಜೀನಾಮೆಯನ್ನು ಸಿಂಗಾಪುರದಿಂದ ಇ-ಮೇಲ್ ಮೂಲಕ ರವಾನಿಸಿದ್ದಾರೆ. ಅದನ್ನು ಶುಕ್ರವಾರ ಅಂಗೀಕರಿಸಲಾಗಿದೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಅಬೆವರ್ದನ ಹೇಳಿದ್ದಾರೆ. ಗೊತಬಯ ರಾಜೀನಾಮೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ದೇಶದಾದ್ಯಂತ ಜನತೆ ಹರ್ಷೋದ್ಗಾರಗಳಿಂದ ಸಂಭ್ರಮಿಸಿದರು. ಜನತೆ ಒಂದಾಗಿ ಹೋರಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದು ಪ್ರತಿಭಟನಾಕಾರರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News