3000 ಕೆಜಿ ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯದ ರಸ್ತೆ ಎಲ್ಲಿ ನಿರ್ಮಾಣವಾಗಲಿದೆ ಗೊತ್ತೇ?
ಬೆಂಗಳೂರು: ನಗರದ ಆರ್‌ಎಂಝೆಡ್ ಎಕೋವರ್ಲ್ಡ್ ಮತ್ತು ಹೊರವರ್ತುಲವನ್ನು ಸಂಪರ್ಕಿಸುವ ರಸ್ತೆ ಯನ್ನು ಪ್ಲಾಸ್ಟಿಕ್ ತ್ಯಾಜ್ಯ ಬಳಸಿಕೊಂಡು ಹೊಸ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ.
ಈ ಯೋಜನೆಯನ್ನು ಬಿಬಿಎಂಪಿ ಹಾಗೂ ಪಾಟ್‍ಹೋಲ್‍ರಾಜಾ ಎಂಬ ಸಾಮಾಜಿಕ ಉದ್ಯಮ ಮತ್ತು ಓಆರ್‌ಆರ್ ಕಂಪನಿ ಜಂಟಿಯಾಗಿ ಅನುಷ್ಠಾನಗೊಳಿಸುತ್ತಿವೆ ಎಂದು timesofindia.com ವರದಿ ಮಾಡಿದೆ.
ಗ್ರಿಡ್‍ಮ್ಯಾಟ್ಸ್ ಎಂಬ ವಿನೂತನ ಪರಿಹಾರವನ್ನು ಬಳಸಿಕೊಂಡು ಈ ರಸ್ತೆ ನಿರ್ಮಿಸಲಾಗುತ್ತಿದೆ. ಇದು ಪೇಟೆಂಟ್ ಪಡೆದ, ಪರಿಸರಸ್ನೇಹಿ, ದೀರ್ಘಕಾಲಿಕ ಬಾಳಿಕೆ ಬರುವ ವಿಧಾನವಾಗಿದ್ದು, ಶೇಕಡ 100ರಷ್ಟು ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ರಸ್ತೆ ಮತ್ತು ಫುಟ್‍ಪಾತ್‍ಗಳನ್ನು ನಿರ್ಮಿಸಲಾಗುತ್ತಿದೆ.
ಈ ರಸ್ತೆಯನ್ನು ನಿರ್ಮಿಸಲು 3000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗುತ್ತಿದೆ ಎಂದು ಪಾಟ್‍ಹೋಲ್‍ರಾಜಾ ಪ್ರಕಟಣೆ ಹೇಳಿದೆ. ಈ ರಸ್ತೆ ನಿರ್ಮಾಣ ಕಾಮಗಾರಿಗೆ ಸಾಮಾನ್ಯ ಕಾಂಕ್ರಿಟ್ ರಸ್ತೆಗಳಿಗೆ ಬಳಕೆಯಾಗುವ ನೀರಿನ ಪ್ರಮಾಣಕ್ಕಿಂದ ಶೇಕಡ 30ರಷ್ಟು ಕಡಿಮೆ ನೀರು ಸಾಕಾಗುತ್ತದೆ ಎಂದು ಪಾಟ್‍ಹೋಲ್‍ರಾಜಾ ನಿರ್ದೇಶಕ ಸೌರಭ್ ಕುಮಾರ್ ಹೇಳುತ್ತಾರೆ. ಜತೆಗೆ ಇದಕ್ಕೆ ಉಕ್ಕಿನ ಬಲವರ್ಧಕ ಕೂಡಾ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಾಂಪ್ರದಾಯಿಕ ಕಾಂಕ್ರೀಟ್ ತಂತ್ರಜ್ಞಾನದಲ್ಲಿ ಈ ನಿರ್ಮಾಣ ಕಾಮಗಾರಿಯಿಂದ 46.5 ಟನ್ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಆದರೆ ಗ್ರಿಡ್‍ಮ್ಯಾಟ್ಸ್ ಪ್ರಕ್ರಿಯೆಯಲ್ಲಿ ಕೇವಲ 11.9 ಟನ್ ಬಿಡುಗಡೆಯಾಗುತ್ತದೆ. ಅಂದರೆ ಸುಮಾರು 34.6 ಟನ್ ಕಡಿಮೆ ಇಂಗಾಲದ ಡೈಆಕ್ಸೈಡ್ ಹೊರಸೂಸಲ್ಪಡುತ್ತದೆ. ಇದು 1,36,800 ಕಿಲೋಮೀಟರ್ ಕಾರು ಚಲಾಯಿಸಿದಾಗ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣಕ್ಕೆ ಸಮ ಎಂದು ಅವರು ವಿವರಿಸಿದ್ದಾರೆ.