ಟೋಲ್ ಪಾವತಿ ರಸ್ತೆಗಳ ದುರವಸ್ಥೆ ಕ್ರಿಮಿನಲ್ ಅಪರಾಧ: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ
ಸುರತ್ಕಲ್, ಜು.18: ಟೋಲ್ ಪಾವತಿಯ ಹೆದ್ದಾರಿಗಳು ಸದಾ ಸುಸ್ಥಿತಿಯಲ್ಲಿ ಇರಬೇಕಾದದ್ದು ನಿಯಮ. ಅವುಗಳನ್ನು ಕಾಲ ಕಾಲಕ್ಕೆ ದುರಸ್ಥಿಗೊಳಿಸದೆ ಟೋಲ್ ಪಾವತಿಸುವ ವಾಹನ ಸವಾರರನ್ನು ಅಪಾಯಕ್ಕೊಡ್ಡುವುದು ಕ್ರಿಮಿನಲ್ ಅಪರಾಧ. ಕರಾವಳಿ ಜಿಲ್ಲೆಗಳ ಹೆದ್ದಾರಿಯ ಇಂದಿನ ದುಸ್ಥಿತಿಗೆ ಗುತ್ತಿಗೆ ಕಂಪೆನಿಗಳು, ಹೆದ್ದಾರಿ ಪ್ರಾಧಿಕಾರ, ಸಂಸದ, ಶಾಸಕರುಗಳು ನೇರ ಹೊಣೆ. ಅಪಾಯಕಾರಿ ಹೆದ್ದಾರಿ ಗುಂಡಿಗಳನ್ನು ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹೆದ್ದಾರಿಗಳಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ಅಣಕು ಶವಯಾತ್ರೆ, ಭೂತ ದಹನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿದೆ.
ಬೈಂದೂರಿನಿಂದ ತಲಪಾಡಿಯವರಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಸಂಚಾರಕ್ಕೆ ಪೂರ್ತಿ ಅನರ್ಹಗೊಳ್ಳುವ ಮಟ್ಟಿಗೆ ಹೊಂಡ, ಗುಂಡಿಮಯವಾಗಿದೆ. ಮಾರಣಾಂತಿಕ ಅಪಘಾತಗಳು ದಿನನಿತ್ಯ ವರದಿಯಾಗುತ್ತಿವೆ. ಇಂತಹ ಗಂಭೀರ ಸಂದರ್ಭದಲ್ಲಿ ತುರ್ತು ಕ್ರಮಗಳಿಗೆ ಮುಂದಾಗ ಬೇಕಾಗಿದ್ದ ಟೋಲ್ ರಸ್ತೆಯ ಗುತ್ತಿಗೆ ಹೊಂದಿರುವ ಕಂಪೆನಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು "ವಿಪರೀತ ಮಳೆಯಿಂದ ರಸ್ತೆಗಳು ಹಾಳಾಗಿವೆ, ಮಳೆಗಾಲದಲ್ಲಿ ಡಾಂಬರು, ಕಾಂಕ್ರಿಟೀಕರಣ ಸಾಧ್ಯವಿಲ್ಲ, ಮಳೆ ಕಡಿಮೆಯಾದ ಮೇಲೆ ದುರಸ್ತಿಗೊಳಿಸಲಾಗುವುದು" ಎಂಬ ಉತ್ತರ ನೀಡುತ್ತಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು, ಸಂಸದ, ಶಾಸಕರುಗಳು ಹೆದ್ದಾರಿ ಇಲಾಖೆಯ ಇಂತಹ ಹೇಳಿಕೆಗಳಿಗೆ ಸಮ್ಮತಿ ಸೂಚಿಸುತ್ತಿದ್ದಾರೆ. ಇದು ಸಮರ್ಥನೀಯ ಅಲ್ಲ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಗೇಟ್ ಗಳಲ್ಲಿ ದಿನವೊಂದಕ್ಕೆ ಕೋಟಿ ರೂಪಾಯಿಗೂ ಹೆಚ್ಚಿನ ಸುಂಕ ಸಂಗ್ರಹಗೊಳ್ಳುತ್ತದೆ. ಅಪಾರ ಲಾಭ ತಂದುಕೊಡುವ ಟೋಲ್ ರಸ್ತೆ ನಿರ್ಮಾಣ, ನಿರ್ವಹಣೆ, ಸುಂಕ ಸಂಗ್ರಹದ ಗುತ್ತಿಗೆ ಪಡೆದ ಕಂಪೆನಿಗಳು ದಾರಿ ದೀಪ, ರಸ್ತೆ ದುರಸ್ಥಿ, ಹುಲ್ಲು ಕತ್ತರಿಸುವುದು, ಮಾರ್ಕಿಂಗ್ ಮಾಡುವುದು ಸೇರಿದಂತೆ ಪ್ರತಿಯೊಂದನ್ನೂ ಸಣ್ಣ ಚ್ಯುತಿಯೂ ಇಲ್ಲದಂತೆ ನಿರ್ವಹಿಸಬೇಕು ಎಂದು ಟೋಲ್ ಗುತ್ತಿಗೆ ನಿಯಮ ಹೇಳುತ್ತದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲೆ ಭ್ರಷ್ಟ ವ್ಯವಸ್ಥೆಯ ಲಾಭ ಪಡೆದು ಕಳಪೆ ದರ್ಜೆಯ ಡಾಮರೀಕರಣ, ಚರಂಡಿ, ಸರ್ವಿಸ್ ರಸ್ತೆಗಳನ್ನು ನಿರ್ಮಿಸಿದ್ದು ಮಳೆಗಾಲ ಬರುತ್ತಲೇ ಬಯಲಾಗತೊಡಗಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಮಳೆಗಾಲದ ಆರಂಭಕ್ಕೆ ಪೂರ್ವದಲ್ಲಿ ಗುಂಡಿ ಬೀಳುವ ಕಡೆಗಳಲ್ಲಿ ಮುನ್ನೆಚ್ಚರಿಕೆಯ ಕಾಮಗಾರಿ, ಚರಂಡಿಗಳನ್ನು ಸರಿಪಡಿಸುವ ಕಾರ್ಯ ನಡೆಸದಿರವುದು ಒಟ್ಟು ಹೆದ್ದಾರಿಗಳಲ್ಲಿ ಭಯಾನಕ ಸ್ಥಿತಿಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಟೋಲ್ ರಸ್ತೆ ಗುತ್ತಿಗೆ ಕಂಪೆನಿಗಳು, ಹೆದ್ದಾರಿ ಪ್ರಾಧಿಕಾರಗಳಿಂದ ತುರ್ತು ಕ್ರಮಗಳನ್ನು ನಡೆಸುವಂತೆ ಮಾಡುವ ಶಾಸನ ಬದ್ಧ ಅಧಿಕಾರ ಜಿಲ್ಲಾಡಳಿತಕ್ಕೆ ಇದ್ದರೂ ಜಿಲ್ಲಾಧಿಕಾರಿಗಳಾಗಲಿ, ಜಿಲ್ಲೆಯ ಸಂಸದರು, ಶಾಸಕರು, ಉಸ್ತುವಾರಿ ಸಚಿವರುಗಳಾಗಲಿ ಆ ಕುರಿತು ಮೌನ ವಹಿಸಿರುವುದು ಅಕ್ಷಮ್ಯ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ರಸ್ತೆ ದುರಸ್ತಿ ಮಾಡದೇ ಹೀಗೆಯೇ ಬಿಟ್ಟರೆ ಅಕ್ಟೋಬರ್ ಮೊದಲವಾರದವರೆಗೂ ಹೆದ್ದಾರಿಗಳು ಕನಿಷ್ಠ ತೇಪೆಯನ್ನೂ ಕಾಣದೆ ಸಂಚಾರವೇ ಅಸಾಧ್ಯವಾಗುವ, ಅಮಾಯಕ ವಾಹನ ಸವಾರರು ಜೀವ ಕಳೆದುಕೊಳ್ಳುವ ಸ್ಥಿತಿ ಮಂದುವರಿಯಬಹುದು. ಜಿಲ್ಲಾಧಿಕಾರಿ, ಜವಾಬ್ದಾರಿಯುತ ಜನಪ್ರತಿನಿಧಿಗಳು ರಸ್ತೆಗಳು ಕನಿಷ್ಠ ಸಂಚಾರ ಯೋಗ್ಯಗೊಳ್ಳುವವರೆಗೆ ಸುಂಕ ಸಂಗ್ರಹಕ್ಕೆ ನಿಷೇಧ ಹೇರುವ ತಮ್ಮ ಶಾಸನ ಬದ್ದ ಅಧಿಕಾರವನ್ನು ಚಲಾಯಿಸಬೇಕು, ಹೆದ್ದಾರಿ ಗುಂಡಿಗಳನ್ನು ಮುಚ್ಚಲು ಆದ್ಯತೆಯ ಕ್ರಮಗಳನ್ನು ಜರುಗಿಸಬೇಕು. ಇಲ್ಲದಿದ್ದಲ್ಲಿ ತೀವ್ರತರದ ಹೋರಾಟಗಳು ಎದುರಾಗಲಿವೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.