ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ: ನ್ಯಾಷನಲ್ ಕಾಲೇಜು ಮೈದಾನ ಒದಗಿಸುವಂತೆ ಸಿಎಂಗೆ ಕಾಂಗ್ರೆಸ್ ಮನವಿ
ಬೆಂಗಳೂರು, ಜು.19: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಚರಿಸಲು ಅವಕಾಶ ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಮನವಿ ಮಾಡಿದೆ.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರೆದಿರುವ ಪತ್ರವನ್ನು ಹಸ್ತಾಂತರಿಸಿ ಮನವಿ ಸಲ್ಲಿಸಿದರು.
ಪತ್ರದ ಸಾರಾಂಶ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಪಕ್ಷಾತೀತವಾಗಿ ಬೆಂಗಳೂರಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದು, ಇದರಲ್ಲಿ ರಾಜ್ಯದ ಎಲ್ಲ ಮೂಲೆಗಳಿಂದಲೂ ದೇಶಭಕ್ತರು ಬಂದು ಭಾಗವಹಿಸಲಿದ್ದಾರೆ. ಇಂತಹ ಪ್ರಮುಖ ಕಾರ್ಯಕ್ರಮ ಆಯೋಜಿಸಲು ಬಸವನಗುಡಿಯ ನ್ಯಾಷನಲ್ ಕಾಲೇಜು ಅತ್ಯಂತ ಸೂಕ್ತವಾದ ಜಾಗವಾಗಿರುವುದರಿಂದ ನಾವು ಬಿಬಿಎಂಪಿಯ ಆಯುಕ್ತರಿಗೆ ಪತ್ರ ಬರೆದು ಅವಕಾಶಕ್ಕಾಗಿ ವಿನಂತಿ ಸಲ್ಲಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಆದರೆ, ಇದುವರೆಗೆ ಬಿಬಿಎಂಪಿಯಿಂದ ನಮಗೆ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಈ ಮೈದಾನದ ಒಂದು ಬದಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿರುವುದರಿಂದ ಅದರ ಕೆಲವೊಂದು ಸಾಮಗ್ರಿಗಳು ಸಂಗ್ರಹವಾಗಿರುವ ಕಾರಣ ಅವುಗಳನ್ನು ತೆರವುಗೊಳಿಸಿ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಆ.15ರಂದು ವಿಜೃಂಭಣೆಯಿಂದ ಜರುಗಿಸಲು ಅನುವಾಗುವಂತೆ ಮೈದಾನವನ್ನು ಸಿದ್ಧಗೊಳಿಸಿ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.
ಒಂದು ವೇಳೆ ಈ ಆವರಣವನ್ನು ನೀಡುವುದಕ್ಕೆ ಅನಾನುಕೂಲವೆ ಆಗಿದ್ದರೆ ಅದರ ಬದಲಾಗಿ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಮಾಡಿಕೊಡುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.