ಅಧಿಕಾರಕ್ಕೆ ಬಂದರೆ, ಈಡಿ, ಐಟಿಸಂಸ್ಥೆಗಳ ತಿದ್ದುಪಡಿ: ಸಿದ್ದರಾಮಯ್ಯ
ಬೆಂಗಳೂರು, ಜು.21: ನಾವು ಅಧಿಕಾರಕ್ಕೆ ಬಂದ ಮೇಲೆ ಪಕ್ಷಾಂತರ ಕಾಯ್ದೆಯನ್ನು ಬಲಪಡಿಸುವ ಜತೆಗೆ ಈಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ತಿದ್ದುಪಡಿ ಮಾಡುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುರುವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ತಿದ್ದುಪಡಿ ಮಾಡದೇ ಇದ್ದಲ್ಲಿ, ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲ್ಲ ಎಂದರು.
ಬಿಜೆಪಿ ಸಂವಿಧಾನವನ್ನೂ ತಿದ್ದುಪಡಿ ಮಾಡುವ ಸಂಚು ರೂಪಿಸಿದೆ. ಆದರೆ ಸಂಸತ್ತಿನಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಸುಮ್ಮನಿದ್ದಾರೆ. ಒಂದು ವೇಳೆ ಸಂವಿಧಾನದ ಮುಕ್ಕಾಲು ಭಾಗವನ್ನು ಬದಲಾವಣೆ ಮಾಡುವುದಾದರೆ ಅದು ಕೇವಲ ಸಂವಿಧಾನಾತ್ಮಕ ಸಮಿತಿಯಿಂದ ಮಾತ್ರ ಮಾಡಬೇಕು ಎಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ತಂದು, ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿದ್ದರು ಎಂದು ಆರೋಪಿಸಿದರು.
ಸಂವಿಧಾನ ಉಳಿದರೆ ಮಾತ್ರ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಉಳಿಯಲು ಸಾಧ್ಯ. ಹೀಗಾಗಿ ನಾವು ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮಾನಸಿಕವಾಗಿ ಕುಗ್ಗಿಸಿದರೆ ಪಕ್ಷದ ಕಾರ್ಯಕರ್ತರು ಹೆದರುತ್ತಾರೆ ಎಂದು ಅಂದುಕೊಂಡಿದ್ದಾರೆ. ಇದೊಂದು ಸುಳ್ಳು ಪ್ರಕರಣ, ಹಾಗಾಗಿ ಇದರಿಂದ ಏನೂ ಮಾಡಲಾಗಲ್ಲ ಎಂಬುದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೂ ಗೊತ್ತಿದೆ ಎಂದರು.
ನಮ್ಮ ಕಾರ್ಯಕರ್ತರು ಯಾರೂ ಭಯ ಪಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಬ್ರಿಟೀಷರ ಕೋವಿಗಳಿಗೆ ಧೈರ್ಯದಿಂದ ಎದೆಕೊಟ್ಟು ನಿಂತ ಪಕ್ಷ. ನಿಮ್ಮ ಈ ಷಡ್ಯಂತ್ರಗಳಿಗೆ ಹೆದರುವವರು ನಾವಲ್ಲ ಎಂಬುದನ್ನು ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ ಎಂದು ಹೇಳಿದರು.
ಸಂಸದೀಯ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಹಿಟ್ಲರ್ ಹೇಗೆ ತನ್ನ ವಿರೋಧಿಗಳನ್ನು ಸಂಹಾರ ಮಾಡಿದ ಅದೇ ರೀತಿ ಕೆಳ ಸಮುದಾಯದ ಜನರನ್ನು ದಾಸ್ಯಕ್ಕೆ ತಳ್ಳಿ, ದೇಶದಲ್ಲಿ ದರ್ಬಾರ್ ಮಾಡಲು ಹೊರಟಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಈ ಚಳುವಳಿ ಶುಕ್ರವಾರದಿಂದ ಜಿಲ್ಲಾ ಮಟ್ಟದಲ್ಲೂ ನಡೆಯಲಿದ್ದು, ಇದು ನಿರಂತರವಾಗಬೇಕು. ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಮತ್ತೊಂದೆಡೆ ಪ್ರಕರಣಗಳನ್ನು ದಾಖಲಿಸಿ, ಬಿಜೆಪಿ ಸೇರಿಕೊಳ್ಳಿ ನಿನ್ನ ಮೇಲಿರುವ ಎಲ್ಲ ಪ್ರಕರಣಗಳನ್ನು ವಜಾ ಮಾಡುತ್ತೇವೆ ಎಂಬ ಆಮಿಷವನ್ನು ಒಡ್ಡುತ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಈಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಕಾರ್ಯದರ್ಶಿಗಳಾದ ಶ್ರೀಧರ್ ಬಾಬು, ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ರಮಾನಾಥ ರೈ, ಪರಮೇಶ್ವರ್ ನಾಯಕ್ ಮತ್ತಿತರರು ಭಾಗವಹಿಸಿದ್ದರು.