ಶೂ, ಸಾಕ್ಸ್ ಖರೀದಿ ಸಂಬಂಧ ಹೊರಡಿಸಿರುವ ಆದೇಶದಲ್ಲಿ ಗೊಂದಲ: ರಮೇಶ್ ಬಾಬು

Update: 2022-07-22 13:27 GMT

ಬೆಂಗಳೂರು, ಜು.22: 2022-23ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತನೇ ತರಗತಿಯವರೆಗಿನ 46.37 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ ಮತ್ತು ಸಾಕ್ಸ್ ಖರೀದಿಸಲು ನಿಬಂಧನೆಗಳಿಗೆ ಒಳಪಟ್ಟು ಜು.8ರಂದು ಹೊರಡಿಸಿರುವ ಸರಕಾರಿ ಆದೇಶದಲ್ಲಿ ಅನೇಕ ಗೊಂದಲಗಳಿವೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದ್ದು, ವಿಳಂಬದ ಆದೇಶದಿಂದ ಮಕ್ಕಳು ಸಕಾಲದಲ್ಲಿ ಶೂ ಮತ್ತು ಸಾಕ್ಸ್ ಪಡೆಯಲು ವಿಫಲರಾಗಿದ್ದಾರೆ. ಕೇವಲ ಒಂದು ಜೊತೆ ಉಚಿತ ಶೂ ಮತ್ತು ಸಾಕ್ಸ್ ನೀಡುವ ಸರಕಾರದ ಆದೇಶದಿಂದ ಮಕ್ಕಳು ತಮ್ಮ ಆವಕಾಶ ಮತ್ತು ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಕೇವಲ ಸರಕಾರಿ ಶಾಲೆಯ ಮಕ್ಕಳಿಗೆ ಅವಕಾಶ ನೀಡಿದ್ದು, ರಾಜ್ಯದ ಅನುದಾನಿತ ಶಾಲಾ ಮಕ್ಕಳು ಉಚಿತ ಶೂ ಮತ್ತು ಸಾಕ್ಸ್ ಆವಕಾಶದಿಂದ ವಂಚಿತರಾಗಿದ್ದಾರೆ. ಇವರಿಗೆ ಬಿಸಿಯೂಟದ ಜೊತೆಗೆ ಉಚಿತ ಶೂ ಸಾಕ್ಸ್ ನೀಡಬೇಕು. ಕರಾವಳಿ ಮತ್ತು ಉತ್ತರ ಕರ್ನಾಟಕದ ಮಕ್ಕಳಿಗೆ ಶೂಗಳ ಬದಲಾಗಿ ಸ್ಯಾಂಡಲ್‍ಗಳನ್ನು ಕೊಳ್ಳುವ ತೀರ್ಮಾನವನ್ನು ಶಾಲಾಭಿವೃದ್ಧಿ ಸಮಿತಿಗೆ ನೀಡಲಾಗಿದೆ. ಆದರೆ ಇದಕ್ಕೆ ದರ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದೇಶದಲ್ಲಿ 132 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿರುವುದಾಗಿ ತಿಳಿಸಲಾಗಿದೆ. ಆದರೆ ಈ ಅನುದಾನವನ್ನು ವಿದ್ಯಾವಿಕಾಸ ಯೋಜನೆಯ ಅನುದಾನದಿಂದ ಬಿಡುಗಡೆ ಮಾಡುವುದಾಗಿ ಷರತ್ತಿನಲ್ಲಿ ತಿಳಿಸಲಾಗಿದೆ. ಮಕ್ಕಳ ಒಂದು ಯೋಜನೆಯನ್ನು ಕಸಿದುಕೊಂಡು ಇನ್ನೊಂದು ಯೋಜನೆ ಜಾರಿ ಮಾಡುವ ವಿಪರ್ಯಾಸ ಏಕೆ? ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.

ಷರತ್ತಿನಲ್ಲಿ ಶೂ ಮತ್ತು ಸಾಕ್ಸ್‍ಗಳನ್ನು, ಸ್ಯಾಂಡಲ್‍ಗಳನ್ನು ಸ್ಥಳೀಯವಾಗಿ ಖರೀದಿಸಲು ಶಾಲಾಭಿವೃದ್ಧಿ ಸಮಿತಿಗೆ ವಹಿಸಲಾಗಿದೆ. ಆದರೆ ಮುಂದುವರೆದ ಷರತ್ತಿನಲ್ಲಿ ಪ್ರತಿಷ್ಠಿತ ಬ್ರಾಂಡೆಡ್ ಕಂಪನಿಗಳ ಸರಬರಾಜುದಾರರಿಂದ ಮತ್ತು ವಾಣಿಜ್ಯ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ ಸರಬರಾಜುದಾರರಿಂದ ಖರೀದಿಸಲು ಸೂಚಿಸಲಾಗಿದೆ. ಇದರಿಂದ ಗೊಂದಲದ ಜೊತೆಗೆ ಅವ್ಯವಹಾರಗಳಿಗೆ ಆನುಕೂಲವಾಗುತ್ತದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಒಂದು ಲಕ್ಷ ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ಮೌಲ್ಯದ ಖರೀದಿಗೆ ಪಾರದರ್ಶಕ ಆಧಿನಿಯಮ 4(2) ಆಡಿಯಲ್ಲಿ ವಿನಾಯಿತಿ ಪಡೆದುಕೊಳ್ಳಲು ಸೂಚಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ಶಾಲಾ ಸಮಿತಿಗಳು ಅನುಮತಿ ಪಡೆದುಕೊಳ್ಳುವುದು ನಿಧಾನವಾದರೆ ಶೈಕ್ಷಣಿಕ ವರ್ಷವೇ ಪೂರ್ಣಗೊಳ್ಳುತ್ತದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ. 

ಸರಕಾರದ ಒಟ್ಟಾರೆ ಆದೇಶ ಮಕ್ಕಳಿಗೆ ನಿಗದಿತ ಸಮಯದಲ್ಲಿ ಶೂ, ಸಾಕ್ಸ್ ನೀಡುವ ಬದಲು, ಕೆಲವೇ ಪೂರೈಕೆದಾರರು ಆದೇಶದ ಷರತ್ತುಗಳನ್ನು ಬಳಸಿಕೊಂಡು ಕಮಿಷನ್ ದಂಧೆಯ ಮೂಲಕ ವ್ಯವಹಾರ ಮಾಡಲು ಅನುಕೂಲವಾಗುವ ರೀತಿಯಲ್ಲಿ ಇರುತ್ತದೆ. ಆದುದರಿಂದ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ, ಈ ಆದೇಶದ ಷರತ್ತುಗಳನ್ನು ಸರಿಪಡಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಬೇಕು ಎಂದು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News