ಕಡಲ್ಕೊರೆತ; ತುರ್ತು ತಡೆಗೆ ಎನ್‌ಡಿಆರ್‌ಎಫ್‌ ನಿಧಿ ಬಿಡುಗಡೆಗೊಳಿಸಲು ವೀರಪ್ಪ ಮೊಯ್ಲಿ ಒತ್ತಾಯ

Update: 2022-07-23 07:06 GMT

ಉಳ್ಳಾಲ: ಕಡಲ್ಕೊರೆತ ತುರ್ತು ತಡೆ ಕಾಮಗಾರಿಗೆ ಎನ್ಡ್‌ಆರ್‌ಎಫ್‌ ಸ್ಕೀಮ್ ನಿಂದ ಹಣ ಬಿಡುಗಡೆ ಮಾಡಲು ಅವಕಾಶವಿದ್ದರೂ ಎನ್ಡ್‌ಆರ್‌ಎಫ್‌ ನಿಧಿಯನ್ನ ಖರ್ಚು ಮಾಡದೆ ಸರಕಾರ ಸುಮ್ಮನೆ ಕುಳಿತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗೆ ಅವರು ಸೋಮೇಶ್ವರ, ಉಚ್ಚಿಲ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಸಮಸ್ಯೆಗಳನ್ನ ಆಲಿಸಿದರು.

ಕಡಲ್ಕೊರೆತ ಸಮಸ್ಯೆ ಹೊಸದೇನು ಅಲ್ಲ. ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಅಳಿವೆಬಾಗಿಲು ಸಹಿತ ಅನೇಕ ಕಡಲ್ಕೊರೆತ ಪ್ರದೇಶಗಳಲ್ಲಿ ಕಾಮಗಾರಿ ನಡೆಸಲಾಗಿದೆ. ಯಾವುದೇ ಶಾಶ್ವತ ಕಾಮಗಾರಿ ನಡೆಸಿದರೂ ಪ್ರತಿ ವರ್ಷ ನಿರ್ವಹಣಾ ಕಾಮಗಾರಿ ಅಗತ್ಯ. ಆದರೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರವು ಅಸಡ್ಡೆ ತೋರಿ ಕಳೆದ ಮೂರು ವರ್ಷಗಳಿಂದಲೂ ಕಡಲ್ಕೊರೆತದ ಉಚ್ಚಿಲ, ಬಟ್ಟಪ್ಪಾಡಿ ಪ್ರದೇಶಗಳನ್ನು ಕಡೆಗಣಿಸುತ್ತಾ ಬಂದಿದೆ. ಬಜೆಟಲ್ಲಿ ಕನಿಷ್ಠ ನಿರ್ವಹಣೆಗೂ ಹಣ ಕೊಡದಿದ್ದರೆ ಕಡಲು ಪ್ರಕ್ಷುಬ್ದಗೊಂಡು ತೀರ ಪ್ರದೇಶ ಸಮುದ್ರ ಪಾಲಾಗ ಬಹುದು. ಈ ಬಗ್ಗೆ ನಾನು ಮತ್ತು ಶಾಸಕ ಖಾದರ್ ತಕ್ಷಣವೇ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಕಡಲ್ಕೊರೆತ ತಡೆಗೆ ತುರ್ತು, ಮಾಧ್ಯಮಿಕ, ಶಾಶ್ವತ ಕಾಮಗಾರಿ ನಡೆಸುವ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದು ಭರವಸೆ ನೀಡಿದರು.

ಶಾಸಕ ಯು.ಟಿ ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News