×
Ad

ಕಾರ್ಮಿಕರು ಮತ, ಧರ್ಮದ ಅಮಲಿನಲ್ಲಿರುವುದು ವಿಷಾದನೀಯ: ಲೋಕಯ್ಯ

Update: 2022-07-24 21:12 IST

ಮಂಗಳೂರು : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಅಸ್ತಿತ್ವಕ್ಕೆ ಬಂದ ಬಳಿಕ ಕಾರ್ಮಿಕರ ಎಲ್ಲಾ ಸವಲತ್ತುಗಳನ್ನು ತೆಗೆದುಹಾಕಿ ದ್ರೋಹವೆಸಗುತ್ತಿದೆ. ಇದರ ವಿರುದ್ಧ ಬೀದಿಗಿಳಿದು ಬದುಕಿಗಾಗಿ ಹೋರಾಡಬೇಕಿದ್ದ ಕಾರ್ಮಿಕರು ಇಂದು ಮತ, ಧರ್ಮದ ಅಮಲಿನಲ್ಲಿರುವುದು ವಿಷಾದನೀಯ ಎಂದು ಸಿಐಟಿಯು ನಾಯಕ ಯು.ಬಿ. ಲೋಕಯ್ಯ ಹೇಳಿದರು.

ವಾಮಂಜೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆದ ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು,

ಬೀಡಿ ಚಳವಳಿಯು ದ.ಕ.ಜಿಲ್ಲೆಯ ಐತಿಹಾಸಿಕ ಚಳವಳಿಯಲ್ಲಿ ಒಂದಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಬೀದಿಗಿಳಿದು ಸವಲತ್ತುಗಳಿಗಾಗಿ ಹೋರಾಟದಲ್ಲಿ ನಿರತರಾಗಿದ್ದರು. ಪಿಎಫ್, ಇಎಸ್‌ಐ ನ್ಯಾಯಯುತ ಕೂಲಿಯನ್ನು ಕಾರ್ಮಿಕರಿಗೆ ದೊರಕಿಸಿಕೊಟ್ಟಿರುವುದು ಕೂಡ ಎಡಪಂಥೀಯ ಚಳವಳಿಗಳಾಗಿವೆ ಎಂದು ಯು.ಬಿ.ಲೋಕಯ್ಯ ಹೇಳಿದರು.

ಕಾರ್ಮಿಕ ಮುಖಂಡ ಕೆ.ಗಂಗಯ್ಯ ಅಮೀನ್ ಮಾತನಾಡಿ ಬೀಡಿ ಉದ್ಯಮವನ್ನು ಸರಕಾರ ಆರೋಗ್ಯದ ಹೆಸರಿನಲ್ಲಿ ನಿಲ್ಲಿಸಲು ಹೊರಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ತೀರ್ಮಾನವನ್ನು ದೇಶದಲ್ಲಿ ಜಾರಿಗೊಳಿಸುವುದಾದರೆ ಬೀಡಿ ಕಾರ್ಮಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದಲ್ಲಿ ಸಾವಿರಾರು ಬೀಡಿ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಲಿವೆ ಎಂದರು.

ಸಿಐಟಿಯು ವಾಮಂಜೂರು ಪ್ರದೇಶ ಮುಖಂಡ ಹೊನ್ನಯ್ಯ ಅಮೀನ್ ಸಭಾಧ್ಯಕ್ಷತೆ ವಹಿಸಿದ್ದರಯ. ಬೀಡಿ ಕೆಲಸಗಾರರ ಸಂಘದ ಮುಖಂಡರಾದ ಭವಾನಿ ದೇವಸಬೆಟ್ಟು, ಪುಷ್ಪಾ ಅಣೆಬದಿ, ಇಬ್ರಾಹಿಂ ದೇವಸಬೆಟ್ಟು, ಕಾರ್ಮಿಕರ ಮುಖಂಡರಾದ ಜಯಶೀಲಾ ತಾರಿಗುಡ್ಡೆ, ರೈತ ಮುಖಂಡರಾದ ಬಾಬು ಸಾಲ್ಯಾನ್,ದಿನೇಶ್ ಬೊಂಡಂತಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News