×
Ad

ರಾಷ್ಟ್ರೀಯ ವಿಪತ್ತು ಮೂಲಕ ಪರಿಹಾರ ಕಾರ್ಯಾಚರಣೆ ನಡೆಸಲಿ: ವೀರಪ್ಪ ಮೊಯ್ಲಿ

Update: 2022-07-24 21:41 IST

ಕಾಪು : ಪ್ರಾಕೃತಿಕ ವಿಕೋಪದಿಂದಾಗಿ ಕರಾವಳಿಯಲ್ಲಿ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಪ್ರತೀ ವರ್ಷ ಉಂಟಾಗುವ ಕಡಲ್ಕೊರೆತ ಸಮಸ್ಯೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಈ ಮೂಲಕ ಪರಿಹಾರರ ಕಾರ್ಯಾಚರಣೆ ನಡೆಸಬೇಕು ಸಂಸದ ವೀರಪ್ಪ ಮೊಯ್ಲಿ ಒತ್ತಾಯಿಸಿದರು.

ರವಿವಾರ ಕಾಪು ತಾಲೂಕಿನ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದ ಬಳಿಕ ರಾಜೀವ ಭನದಲ್ಲಿ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಕಡಲ್ಕೊರೆತ ಪ್ರದೇಶ ಮತ್ತು ಪ್ರಾಕೃತಿಕ ವಿಕೋಪ ಪ್ರದೇಶಗಳಲ್ಲಿ ರಾಜಕೀಯ ರಹಿತವಾಗಿ ತುರ್ತು ಪರಿಹಾರ ಕಾರ್ಯಾಚರಣೆ ನಡೆಸಬೇಕಿದೆ. ಓಟಿನ ರಾಜಕೀಯದಿಂದಾಗಿ ಕೆಲವೆಡೆ ಸಮಸ್ಯೆ ಹೆಚ್ಚಾಗಿದ್ದು ಬಿಜೆಪಿ ನಡೆಸುತ್ತಿರುವ ರಾಜಕೀಯ ವ್ಯತ್ಯಾಸ ಕೂಡಾ ಒಂದು ರಾಷ್ಟ್ರೀಯ ದುರಂತವಾಗಿದೆ ಎಂದು ಎಂದು ಸಂಸದ ವೀರಪ್ಪ ಮೊಯ್ಲಿ ಆರೋಪಿಸಿದರು.

ಕಡಲ್ಕೊರೆತ ಭೀತಿಯಿರುವ ಪ್ರದೇಶಗಳ ಬಗ್ಗೆ 1990 ರಿಂದ 2016ರವರೆಗೆ ನಿರಂತರ ಅಧ್ಯಯನ ನಡೆಸಿದ್ದು, ಕರಾವಳಿಯ ಶೇ. 22 ರಷ್ಟು ಭೂ ಪ್ರದೇಶದಲ್ಲಿ 300 ಕಿ.ಮೀ. ಉದ್ದದ ಕಡಲ ತೀರದಲ್ಲಿ ಕಡಲ್ಕೊರೆತದ ಭೀತಿಯ ಬಗ್ಗೆ ಬಗ್ಗೆ ವರದಿ ನೀಡಲಾಗಿದೆ.  ಆದರೆ ಅಧ್ಯಯನ ವರದಿಯ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು.

ಪಕ್ಷ ನಿರ್ಧರಿಸುತ್ತದೆ: ಮುಖ್ಯಮಮಂತ್ರಿ ಅಭ್ಯರ್ಥಿ ಕುರಿತಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಕೇಳಿದಾಗ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ನಮ್ಮಲ್ಲಿ ಪಕ್ಷ ಮೊದಲು, ಅಭ್ಯರ್ಥಿ ನಂತರ ಎಂಬ ಸಿದ್ಧಾಂತವಿದೆ. ಅದು ನಾವು ಬೆಳೆದು ಬಂದ ರೀತಿ.  ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲ ಸೃಷ್ಟಿಸುವವರು, ಲಾಭಿ ನಡೆಸುತ್ತಿರುವವರು, ಲಾಭಿಗೆ ಪ್ರೇರಣೆ ನೀಡುವವರ ವಿರುದ್ಧ ಪಕ್ಷ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದ ಅವರು, ಶಾಸಕ ಝಮೀರ್ ಅಹ್ಮದ್‌ ಅವರದ್ದು ಅಧಿಕ ಪ್ರಸಂಗದ ಮಾತು ಎಂದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಪಕ್ಷ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. ಹೆಚ್ಚಿನ ಕಡೆಗಳಿಗೆ ಆರು ತಿಂಗಳಿಗೆ ಮೊದಲೇ ಅಭ್ಯರ್ಥಿಗಳನ್ನು ಗೊತ್ತು ಪಡಿಸಿ ಅವರ ಮೂಲಕ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಜೋಡಣೆ ನಡೆಸಲಾಗುವುದು ಎಂದರು.

ಶಕ್ತಿ ಪ್ರದರ್ಶನ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ. ಅವರ ನೇತೃತ್ವದಲ್ಲಿ ಕಾಂಗ್ರೆಸ್‍ನ ಶಕ್ತಿ ಪ್ರದರ್ಶನ ನಡೆಯಲಿದೆ. ಕಾಂಗ್ರೆಸ್ ಪಕ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಜನಸಂಪರ್ಕ ಶಿಬಿರ, ಸಂಘಟನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮವೂ ಅದರ ಭಾಗವಾಗಿದೆ. ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಂಡು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಲಿದ್ದೇವೆ ಎಂದರು.

ಪರ್ಸಂಟೇಜ್ ಸರಕಾರದಿಂದ ಹೊಂಡ ಮುಚ್ಚಲು ಸಾಧ್ಯವೇ ? : ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹೊಂಡಮಯವಾಗಿದ್ದು ಹಲವಾರು ಅಪಘತಗಳು ದಿನನಿತ್ಯ ನಡೆಯುತ್ತಿದೆ. ಇದನ್ನು  ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಕಾರ್ಯಾಚರಣೆಗಳನ್ನು ನಡೆಸಬೇಕಿದೆ. ಆದರೆ ಸರಕಾರ ಮಾತ್ರ 40 ಪರ್ಸಂಟ್ ಕಮೀಷನ್ ಸಂಗ್ರಹಣೆ ಮಾಡುವ ಮೂಲಕ ಭ್ರಷ್ಟಾಚಾರವನ್ನು ಬೆಂಬಲಿಸುತ್ತದೆ. ಈ ಸರಕಾರದಿಂದ ನಾವೇನು ನಿರೀಕ್ಷಿಸಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಮೇಲಿನ ಇಡಿ ವಿಚಾರಣೆ ಸಂಪೂರ್ಣ ರಾಜಕೀಯ ಪ್ರೇರಿತ. ಇದು ಬಿಜೆಪಿ ಪ್ರೇರಿತ ಕಾನೂನು ಬಾಹಿರ ತನಿಖೆಯಾಗಿದೆ ಎಂದು ಆಪಾದಿಸಿದ ಅವರು, ಕೇಂದ್ರ ಸರಕಾರದ ತನಿಖಾ ಆಯೋಗ, ಚುನಾವಣಾ ಆಯೋಗ ಈಗಾಗಲೇ ಕ್ಲೀನ್ ಚೀಟ್ ನೀಡಿರುವ ಪ್ರಕರಣದ ಬಗ್ಗೆ ಮತ್ತೆ ವಿಚಾರಣೆ, ತನಿಖೆ ನಡೆಸುತ್ತಿರುವುದು ಸರಿಯಲ್ಲ ಎಂದರು. 

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಕಾಂಗ್ರೆಸ್ ಕಾರ್ಡಿನೇಟರ್ ನವೀನ್‍ಚಂದ್ರ ಜೆ ಶೆಟ್ಟಿ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶರ್ಫುದ್ದಿನ್ ಶೇಖ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮಹಿಳಾ ಕಾಂಗ್ರೆಸ್ ಶಾಂತಲತಾ ಶೆಟ್ಟಿ, ಲಕ್ಷ್ಮೀಶ ತಂತ್ರಿ, ಅಶೋಕ್ ನಾಯರಿ, ಸತೀಶ್ ದೇವಾಡಿಗ ಕಾರ್ಕಳ, ಅಶೋಕ್ ಡಿಕೆ, ಸಹನಾ ತಂತ್ರಿ, ಸುರೇಶ್ ಕೆ ಶೆಟ್ಟಿ ಕೋಟೇಶ್ವರ, ಮಂಜುನಾಥ್ ಪೂಜಾರಿ ಹೆಬ್ರಿ, ಭಾಸ್ಕರ್ ಮೊಯ್ಲಿ ಮಂಗಳೂರು, ಅಶ್ವಿನಿ ಕಾಪು ದೀಪಕ್ ಎರ್ಮಾಳು, ಯು ಸಿ ಶೇಕಬ್ಬ ಉಚ್ಚಿಲ, ರಾಧಿಕಾ ಪೊಲಿಪು, ಸತೀಶ್ ತೊಟ್ಟಂ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News