ಪಡುಬಿದ್ರೆ : ಗ್ಯಾಸ್ ಗೋದಾಮು ತೆರವಿಗೆ ಆಗ್ರಹಿಸಿ ದಸಂಸ ಧರಣಿ

Update: 2022-07-25 16:38 GMT

ಪಡುಬಿದ್ರೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದಲ್ಲಿರುವ ಎಸ್‍ಸಿ ಕಾಲನಿ ಬಳಿ ಅನಧಿಕೃತ ಅಪಾಯಕಾರಿ ಗೋದಾಮು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರತಿಭಟನಾ ಜಾಥಾ ಹಾಗೂ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಯಿತು.

ಗ್ಯಾಸ್ ಗೋದಾಮು ಇರುವ ಎಸ್‍ಸಿ ಕಾಲನಿಯಿಂದ ಕಾರ್ಕಳ ರಸ್ತೆಯ ಮೂಲಕ ಹಾದು ಪಡುಬಿದ್ರಿ ಪೇಟೆಯಾಗಿ ಗ್ರಾಮ ಪಂಚಾಯಿತಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ಯಾಸ್ ಗೋಡೋನ್ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಲಾಯಿತು. ದಲಿತ ಕುಟುಂಬ ವಾಸಿಸುವ ಜನವಸತಿ ಪ್ರದೇಶದಲ್ಲಿ ಭಾರತ್ ಗ್ಯಾಸ್ ಗೋದಾಮು ಇದ್ದು, ಅದರ ಪರವಾನಿಗೆಯೂ 2021ರ ಸೆಪ್ಟಂಬರ್ 30ರಂದು ಅಂತಿಮವಾಗಿದೆ.  ಮತ್ತೆ ನವೀಕರಣಗೊಳಿಸಬಾರದಾಗಿಯೂ, ಅನಧಿಕೃತವಾಗಿ ವ್ಯವಹರಿಸುತ್ತಿರುವ ಗೋದಾಮನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ದಲಿತ ಸಮಿತಿಯು ನೀಡಿದ ಮನವಿಯನ್ನು ಸ್ವೀಕರಿಸಿ, ನಾಗರಿಕ ಆಹಾರ ಪೂರೈಕೆ ಇಲಾಖೆಯು ಸ್ವಾಧೀನ ಪಡಿಸಿಕೊಂಡಿರುವ ಸುಮಾರು 20 ಗ್ಯಾಸ್ ಸಿಲಿಂಡರ್‍ಗಳನ್ನು ಅಲ್ಲಿಂದ ಫುಡ್ ಇನ್ಸ್‌ಪೆಕ್ಟರ್ ಸ್ಥಳಾಂತರಿಸಿದ್ದಾರೆ. ಗ್ಯಾಸ್ ಗೋದಾಮು ವಿರುದ್ಧ ನಿಯಮಾನುಸಾರ ಹಾಗೂ ನ್ಯಾಯಾಲಯದ ಆದೇಶದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. 

ಮನವಿಯನ್ನು ಸ್ವೀಕರಿಸಿದ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರು ಮಾತನಾಡಿ, ಜನವಿರೋಧಿ ನೆಲೆಯಲ್ಲಿ ಗ್ಯಾಸ್ ಗೋಡೌನ್‍ನ ಪರವಾನಿಗೆಯನ್ನು ನವೀಕರಿಸಿಲ್ಲ. ಅದನ್ನು ತೆರವುಗೊಳಿಸಲು ಕಾನೂನಾತ್ಮಕವಾಗಿ ಪಂಚಾಯತ್ ವ್ಯವಹರಿಸಲಿದೆ ಎಂದರು.

ಗ್ಯಾಸ್ ಗೋದಾಮು ಪಕ್ಕದಲ್ಲಿ ಸುಮಾರು 32 ಕುಟುಂಬ ವಾಸ್ತವ್ಯವಿದೆ. ಇದರ ವಿರುದ್ದ ಸ್ಥಳಿಯರು ಹಾಗೂ ಪರಿಶಿಷ್ಟ ಜಾತಿ ಕಾಲನಿಯ ಮನೆ ಮಂದಿ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ  ಜನವಸತಿ ಪ್ರದೇಶದಿಂದ ತೆರವುಗೊಳಿಸಬೇಕಾದ ನ್ಯಾಯಾಲಯದ ಆದೇಶವೂ ಈ ಕುರಿತಾಗಿ ನ್ಯಾಯದ ಮೊರೆ ಹೋಗಿದ್ದ ಸ್ಥಳೀಯರಿಗೆ ಲಭಿಸಿದೆ. ಈ ನಡುವೆ ದಲಿತರ ಮನವಿಯನ್ನು ಪುರಸ್ಕರಿಸಿ ಪಡುಬಿದ್ರಿ ಗ್ರಾಮ ಪಂಚಾಯಿತಿ ತನ್ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪರವಾನಿಗೆಯನ್ನೂ ನವೀಕರಿಸಬಾರದೆಂಬ ನಿರ್ಣಯ ಕೈಗೊಂಡಿದೆ ಎಂಬುದಾಗಿಯೂ ತಮ್ಮ ಪ್ರತಿಭಟನಾ ಸಭೆಯಲ್ಲಿ ದಲಿತ ನಾಯಕರು ಪ್ರತಿಪಾದಿಸಿದ್ದಾರೆ.

ಇದೀಗ ಅನಧಿಕೃತವಾಗಿಯೇ ಗ್ಯಾಸ್ ಗೋಡಾನ್ ಕಾರ್ಯಾಚರಿಸುತ್ತಿದ್ದು, ಇದನ್ನು ಆದಷ್ಟು ಶೀಘ್ರ ತೆರವುಗೊಳಿಸುವಂತೆ ತಮ್ಮ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯು ಗ್ರಾಮ ಸಮಿತಿಯ ಜತೆಗೂಡಿ ಒತ್ತಾಯಿಸಿದೆ.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ಪರಮೇಶ್ವರ ಉಪ್ಪೂರ್, ವಿಠಲ ಉಚ್ಚಿಲ, ಶ್ರೀಧರ್ ಉಡುಪಿ, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಸುರೇಶ್ ಪಾದೆಬೆಟ್ಟು, ಮಹಿಳಾ ಸಂಚಾಲಕಿ ವಸಂತಿ ಶಿವಾನಂದ್ ಕಲ್ಲಟ್ಟೆ, ಕಾರ್ಯದರ್ಶಿ ಶಿವಾನಂದ ಕಲ್ಲಟ್ಟೆ, ರಮೇಶ ನಂಬಿಯಾರ್, ಗುಣಕರ್ ಕಂಚಿನಡ್ಕ, ರಮೇಶ್ ಕಲ್ಲಟ್ಟೆ, ವಿಠಲ ಮಾಸ್ಟರ್ ಕಲ್ಲಟ್ಟೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News