ಶ್ರೀಲಂಕಾ: ಆಸ್ಪತ್ರೆಗಳು ದಿವಾಳಿ; ರೋಗಿಗಳಿಗೆ ಚಿಕಿತ್ಸೆ ಬಂದ್

Update: 2022-07-26 15:56 GMT

ಕೊಲಂಬೊ, ಜು.26: ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾದಲ್ಲಿ ಆಸ್ಪತ್ರೆಗಳೂ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದು ವಿದ್ಯುತ್ ಪೂರೈಕೆಯಿಲ್ಲದೆ ವಾರ್ಡ್ಗಳು ಕಗ್ಗತ್ತಲಿನಲ್ಲಿ ಮುಳುಗಿದೆ. ದೇಶದ ಪ್ರಮುಖ ಆಸ್ಪತ್ರೆ ನ್ಯಾಷನಲ್ ಹಾಸ್ಪಿಟಲ್ನಲ್ಲಿ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳು ಪೂರ್ಣ ಗುಣಮುಖರಾಗುವ ಮುನ್ನವೇ ಅವರನ್ನು ಡಿಸ್ಚಾರ್ಜ್ ಮಾಡಿ, ಮುಂದಿನ ಔಷಧವನ್ನು ಖಾಸಗಿ ಕ್ಲಿನಿಕ್ನಲ್ಲಿ ಪಡೆಯಲು ಸೂಚಿಸಲಾಗುತ್ತಿದೆ. ವೈದ್ಯರ ಪಾಳಿ (ಶಿಫ್ಟ್) ಕೂಡಾ ನಿಂತುಹೋಗಿದೆ. ಅಸಾಮಾನ್ಯ ಆರ್ಥಿಕ ಬಿಕ್ಕಟ್ಟು ಉಚಿತ ಮತ್ತು ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಗೆ ಮಾರಣಾಂತಿಕ ಪ್ರಹಾರ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ಮೊಣಕಾಲ ನೋವಿನಿಂದ ಬಳಲುತ್ತಿದ್ದ ತಾನು ನ್ಯಾಷನಲ್ ಹಾಸ್ಪಿಟಲ್ಗೆ ದಾಖಲಾಗಿದ್ದು 4 ದಿನದ ಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲಿ ಸರಕಾರ ಸಬ್ಸಿಡಿ ದರದಲ್ಲಿ ಒದಗಿಸುವ ನೋವು ನಿವಾರಕ ಮಾತ್ರೆ ಕಾಲಿಯಾಗಿದೆ ಎಂದು ತಿಳಿಸಿ, ಪೂರ್ಣ ಗುಣಮುಖರಾಗುವ ಮುನ್ನವೇ ತನ್ನನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಉಳಿದ ಔಷಧಗಳನ್ನು ಖಾಸಗಿ ಮೆಡಿಕಲ್ನಿಂದ ಖರೀದಿಸುವಂತೆ ಸೂಚಿಸಿದ್ದಾರೆ.

ಆದರೆ ತನ್ನಲ್ಲಿ ಹಣವಿಲ್ಲದಿರುವುದರಿಂದ ಮುಂದೆ ಏನು ಮಾಡುವುದೆಂದು ತಿಳಿಯುತ್ತಿಲ್ಲ ಎಂದು 70 ವರ್ಷದ ಮೇರಿಯನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ದೇಶದೆಲ್ಲೆಡೆಯ ರೋಗಿಗಳಿಗೆ ವಿಶೇಷ ಚಿಕಿತ್ಸೆ ಒದಗಿಸುವ ನ್ಯಾಷನಲ್ ಆಸ್ಪತ್ರೆಗೂ ಈಗ ಸಿಬಂದಿಗಳ ಕೊರತೆ ಕಾಡುತ್ತಿದೆ. 3,400 ಬೆಡ್ಗಳಲ್ಲಿ ಬಹುತೇಕ ಬೆಡ್ಗಳು ಕಾಲಿಯಾಗಿ ಉಳಿದಿದೆ. ಶಸ್ತ್ರಚಿಕಿತ್ಸಾ ಸಾಧನ ಮತ್ತು ಜೀವರಕ್ಷಕ ಔಷಧಗಳ ಪೂರೈಕೆ ಬಹುತೇಕ ಬರಿದಾಗಿದೆ.

ಪೆಟ್ರೋಲ್ನ ತೀವ್ರ ಕೊರತೆಯಿಂದ ವೈದ್ಯರು ಮತ್ತು ರೋಗಿಗಳಿಗೆ ಪ್ರಯಾಣ ದುಸ್ತರವಾಗಿದೆ. ಕಾರಿದ್ದರೂ ಪೆಟ್ರೋಲ್ ಇಲ್ಲ. ಪ್ರಯಾಣ ಸಾಧ್ಯವಾಗದಿರುವುದರಿಂದ ಕರ್ತವ್ಯದಲ್ಲಿರುವ ವೈದ್ಯಕೀಯ ಸಿಬಂದಿ ಡಬಲ್ ಶಿಫ್ಟ್ನಲ್ಲಿ ಕೆಲಸ ಮಾಡಬೇಕಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳೂ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘಟನೆಯ ಅಧ್ಯಕ್ಷ ಡಾ. ವಾಸನ್ ರತ್ನಸಿಂಗಮ್ ಹೇಳಿರುವುದಾಗಿ ಎಎಫ್ಪಿ ವರದಿ ಮಾಡಿದೆ. ಶ್ರೀಲಂಕಾ ತನ್ನ 85% ಔಷಧ ಮತ್ತು ಔಷಧ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಆದರೆ ದೇಶವು ಈಗ ದಿವಾಳಿಯ ಅಂಚಿನಲ್ಲಿರುವುದರಿಂದ ವಿದೇಶಿ ವಿನಿಮಯ ದಾಸ್ತಾನು ಬರಿದಾಗಿದೆ. ಇದರಿಂದ ಸಾಕಷ್ಟು ಪ್ರಮಾಣದ ತೈಲ ಮತ್ತು ಔಷಧವನ್ನು ಆಮದು ಮಾಡಿಕೊಳ್ಳಲು ತೊಡಕಾಗುತ್ತಿದೆ. ಸಾಮಾನ್ಯ ನೋವು ನಿವಾರಕಗಳು, ಆ್ಯಂಟಿ ಬಯಾಟಿಕ್ಗಳು, ಶಿಶುಗಳ ಔಷಧಗಳ ತೀವ್ರ ಕೊರತೆಯಿದೆ. ಇತರ ಔಷಧಗಳು ಅಲ್ಪಪ್ರಮಾಣದಲ್ಲಿ ಲಭ್ಯವಿದ್ದರೂ ಕಳೆದ 3 ತಿಂಗಳಲ್ಲಿ ದರ ನಾಲ್ಕುಪಟ್ಟು ಹೆಚ್ಚಿದೆ ಎಂದು ಔಷಧ ಅಂಗಡಿಯ ಮಾಲಕರು ಹೇಳಿದ್ದಾರೆ. ಒಂದೊಮ್ಮೆ ಬಲಿಷ್ಟವಾಗಿದ್ದ ಶ್ರೀಲಂಕಾದ ಆರೋಗ್ಯಸೇವಾ ವ್ಯವಸ್ಥೆ ಈಗ ಅಪಾಯದಲ್ಲಿದೆ. ದುರ್ಬಲ ವರ್ಗದವರು ಅತೀ ಹೆಚ್ಚಿನ ತೊಂದರೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಹನಾ ಸಿಂಗರ್-ಹಮ್ದಿ ಆತಂಕ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ತುರ್ತು ಅಗತ್ಯವಿರುವ ಔಷಧಗಳ ಮತ್ತು ರೇಬೀಸ್ ನಿರೋಧಕ ಲಸಿಕೆಗಳ ಆಮದಿಗೆ ನೆರವು ನೀಡುವುದಾಗಿ ವಿಶ್ವಬ್ಯಾಂಕ್ ಘೋಷಿಸಿದೆ.

ಈಗ ಇರುವ ಆರ್ಥಿಕ ವಿಪತ್ತು ಮುಂದುವರಿದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಕುಸಿತದ ಅಂಚಿಗೆ ತಲುಪಬಹುದು. ಶ್ರೀಲಂಕಾದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಪರಾಕಾಷ್ಟೆಗೆ ತಲುಪಿ ಇನ್ನಷ್ಟು ಶಿಶುಗಳು ಸಾವನ್ನಪ್ಪಬಹುದು ಎಂದು ಡಾ. ವಾಸನ್ ರತ್ನಸಿಂಗಮ್ ಹೇಳಿದ್ದಾರೆ.

 ಅತ್ಯಗತ್ಯದ ಔಷಧಗಳ ಕೊರತೆ

ದೇಶದಲ್ಲಿ ಮೂಲ, ಅಗತ್ಯದ ಔಷಧಗಳ ತೀವ್ರ ಕೊರತೆಯಿದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ಸದ್ಯಕ್ಕೆ ಮುಂದೂಡಿ ಅತ್ಯಗತ್ಯ ಶಸ್ತ್ರಚಿಕಿತ್ಸೆಯನ್ನು ಮಾತ್ರ ನೆರವೇರಿಸುವ ಅನಿವಾರ್ಯತೆಯಿದೆ. ಲಭ್ಯವಿರುವ ಅಲ್ಪಪ್ರಮಾಣದ ಔಷಧವನ್ನು ಗಂಭೀರಾವಸ್ಥೆಯಲ್ಲಿರುವ ರೋಗಿಗಳಿಗೆ ಮಾತ್ರ ಒದಗಿಸುವ ಪರಿಸ್ಥಿತಿಯಿದೆ ಎಂದು ಮೂಲಗಳು ಹೇಳಿವೆ. ಭಾರತ, ಬಾಂಗ್ಲಾದೇಶ, ಜಪಾನ್ ಸೇರಿದಂತೆ ಹಲವು ದೇಶಗಳು ಶ್ರೀಲಂಕಾಕ್ಕೆ ತುರ್ತು ಅಗತ್ಯದ ಔಷಧಗಳನ್ನು ಒದಗಿಸಿವೆ.

ವಿದೇಶದಲ್ಲಿ ನೆಲೆಸಿರುವ ಶ್ರೀಲಂಕಾ ಪ್ರಜೆಗಳೂ ದೇಶಕ್ಕೆ ಔಷಧ ಮತ್ತು ವೈದ್ಯಕೀಯ ಸಾಧನಗಳನ್ನು ಪೂರೈಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News