×
Ad

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2022-07-30 16:08 IST

ಬೆಂಗಳೂರು, ಜುಲೈ 30 : ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ “ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಕಲ್ಲು ಹೊಡೆಯಬಹುದಾಗಿತ್ತು” ಎಂಬ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದ ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಮತ್ತು  ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.   

ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತಾ, “ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಕಲ್ಲು ಹೊಡೆಯಬಹುದಾಗಿತ್ತು” ಎಂದು ಹೇಳಿಕೆ ನೀಡಿದ್ದರು. ಜವಾಬ್ದಾರಿಯುವ ಸ್ಥಾನದಲ್ಲಿದ್ದು, ಸಂಸದರು ಈ ರೀತಿ ಬೇಜವಾಬ್ದಾರಿಯುವ ಹೇಳಿಕೆ ನೀಡಿದ್ದನ್ನ ಖಂಡಿಸಿ ತೇಜಸ್ವಿ ಸೂರ್ಯ ಅವರ ಗೃಹ ಕಚೇರಿಗೆ ಹೋಗಿ ಕಲ್ಲುಗಳನ್ನು ಉಡುಗೊರೆ ಮತ್ತು ಹೂಗಳನ್ನು ನೀಡುವ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿತ್ತು. ಇದರ ನೇತೃತ್ವ ವಹಿಸಿದ್ದ ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಅವರನ್ನ ದಾರಿಯ ಮಧ್ಯೆಯೇ ಪೊಲೀಸರು  ವಶಕ್ಕೆ ಪಡೆದರು. 

ನಾವು ಶಾಂತಿಯುತವಾಗಿ ಪ್ರತಿಭಟನೆಗೆ ಮುಂದಾಗಿದ್ದೇವು. ಆದ್ರೆ ನಮ್ಮನ್ನ ದಾರಿ ನಡುವೆಯೇ ಅರೆಸ್ಟ್ ಮಾಡಿದ್ದಾರೆ. ಹಾಗೇ ನಮ್ಮ ಪ್ರತಿಭಟನೆಯನ್ನ ತಡೆದಿದ್ದಾರೆ. ಇದೇ ರೀತಿಯ ಎಚ್ಚರಿಕೆಯನ್ನು ನೀವು ಅಲ್ಲಿ ( ಮಂಗಳೂರು ) ಮಾಡಿದ್ದರೇ ಈ ರೀತಿ ಆಗುತ್ತಿರಲಿಲ್ಲ.ಆದ್ರೂ ನಿಮ್ಮ ಕೆಲಸವನ್ನ ನೀವು ಮಾಡಿ, ಪ್ರಜಾಪ್ರಭುತ್ವದ ರಕ್ಷಣೆ ಕೆಲಸವನ್ನು ನಾವು ಮಾಡುತ್ತೇವೆ ಎಂದು  ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಹೇಳಿದ್ದಾರೆ. 

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ತೇಜಸ್ವಿ ಸೂರ್ಯ ಅವರು  ಬೇಜವಾಬ್ದಾರಿಯುತ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವಂತೆ ಪ್ರಚೋದನೆ ನೀಡಿದ್ದಾರೆ. ಇದನ್ನು ಪ್ರಶ್ನೆ ಮಾಡಿ, ಶಾಂತಿಯುತ ಪ್ರತಿಭಟನೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು  ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡಲಿಲ್ಲ. ಇದು ಯಾವ ನ್ಯಾಯ ? ಬೇಜವಾಬ್ದಾರಿಯುತ ಹೇಳಿಕೆಯನ್ನು ಪ್ರಶ್ನೆ ಮಾಡುವ ಅಧಿಕಾರವೂ ನಮ್ಮಗಿಲ್ವಾ ? ಆದ್ರೂ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಡಾ. ಶಂಕರ ಗುಹಾ ದ್ವಾರಕನಾಥ್ ಗುಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂದು ಹೇಳಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇಂದು ತನ್ನ ಮತ್ತು ಶಾಸಕ ರವಿ ಸುಬ್ರಮಣ್ಯ ಅವರ  ಗೃಹ ಕಚೇರಿ ಮುಂದೆ ಪೊಲೀಸ್ ಸರ್ಪಗಾವಲು ಹಾಕಿಕೊಂಡು ರಕ್ಷಣೆ ಪಡೆದುಕೊಂಡಿರುವುದು ಯಾಕೆ ? ಇಷ್ಟೊಂದು ಭಯನಾ ನಿಮಗೆ ? ನಿಮಗೆ ಮಾತ್ರ ರಕ್ಷಣೆ ಬೇಕು. ಜನ ಸಾಮಾನ್ಯರಿಗೆ ಮಾತ್ರ ರಕ್ಷಣೆ ಬೇಡ್ವಾ ? ಓರ್ವ ಜನಪ್ರತಿನಿಧಿಯಾಗಿ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು ಅನ್ನೋ ಸಾಮಾನ್ಯ ಜ್ಞಾನವೂ ನಿಮಗಿಲ್ವಾ ಎಂದು ಅವರು  ತೇಜಸ್ವಿ ಸೂರ್ಯ ವಿರುದ್ಧ ಗುಡುಗಿದ್ದಾರೆ.
 
ಇನ್ನೊಂದೆಡೆ ಬೆಂಗಳೂರಿನ ಗಿರಿನಗರದಲ್ಲಿ ಶಾಂತಿಯುತ  ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತೊಂದು ಕಡೆ ಪತ್ರಕರ್ತೆ ಹೆಸರಲ್ಲಿ ಸಂಸದರ ಮನೆಗೆ ತೆರಳಿ ಹೂಗಳನ್ನ ನೀಡಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನ ಸ್ಥಳದಲ್ಲಿಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News