ಕೋಮುವಾದಿಗಳನ್ನು ಹತ್ತಿಕ್ಕಲು ಬ್ಯಾರಿ ಮುಸ್ಲಿಮರು-ಬಿಲ್ಲವರು ಒಂದಾಗಬೇಕು

Update: 2022-08-01 05:04 GMT

ಮುನೀರ್ ಕಾಟಿಪಳ್ಳ: ಬ್ಯಾರಿ-ಬಿಲ್ಲವರ ಮಧ್ಯೆ ಹಳೆಯ ಸಂಬಂಧ ಮರುಕಳಿಸಬೇಕು. ಪರಸ್ಪರ ಬೆಸೆಯಬೇಕು. ಸೌಹಾರ್ದ ವಾತಾವರಣ ಸೃಷ್ಟಿಸಬೇಕು. ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಈ ಎರಡೂ ಸಮಾಜದ ಜನರು ವೈಷಮ್ಯ ಮರೆತು ಒಂದಾದರೆ ರಾಜಕೀಯ ವಾಗಿಯೂ ಬಲಿಷ್ಠವಾಗಬಹುದು. ಕೋಮು ಹಿಂಸಾ ರಾಜಕಾರಣಕ್ಕೂ ಕಡಿವಾಣ ಹಾಕಬಹುದು. ಇಬ್ಬರಲ್ಲಿ ಜಗಳ ಸೃಷ್ಟಿಸಿ ಲಾಭ ಪಡೆಯಲು ಹವಣಿಸುವ ಮೂರನೇ ಶಕ್ತಿಯನ್ನು ಸೋಲಿಸಬಹುದು.

 ಪದ್ಮರಾಜ್: ಹಿಂದೂ ಸಮಾಜವನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳದ ಕೆಲವು ಸ್ವಾಮೀಜಿಗಳು ಕೂಡ ರಾಜಕಾರಣಿಗಳ ದಾಟಿಯಲ್ಲಿ ಮಾತನಾಡುವುದನ್ನು ಕಾಣಬಹುದು. ಆದಾಗ್ಯೂ ಬಿಲ್ಲವ ಯುವಕರಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಆ ಮೂಲಕ ಒಳ್ಳೆಯ ಸಂದೇಶ ಸಮಾಜ, ಸಮುದಾಯದಲ್ಲಿ ಹರಡಲಿ ಎಂದು ನಾನು ಆಶಿಸುವೆ.

ಮಂಗಳೂರು, ಜು.31: ಸಂಘ ಪರಿವಾರದ ಪ್ರಯೋಗಶಾಲೆ ಎಂಬಂತಿರುವ ದ.ಕ. ಜಿಲ್ಲೆಯಲ್ಲಿ ಕೋಮುವಾದ, ಕೋಮುಗಲಭೆ, ಕೋಮುವೈಷಮ್ಯ ಇತ್ಯಾದಿಗಳ ಹೆಸರಿನಲ್ಲಿ ನಡೆಯುವ ಬಹುತೇಕ ಅಹಿತಕರ ಘಟನೆಗಳಲ್ಲಿ ಬ್ಯಾರಿ-ಬಿಲ್ಲವ ಯುವಕರು ಅಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಮತ್ತು ಕೋಮು ಹಿಂಸೆಯ ರಾಜಕಾರಣಕ್ಕೆ ಬ್ಯಾರಿ-ಬಿಲ್ಲವರೇ ಹೆಚ್ಚು ಬಲಿಪಶುಗಳಾಗುತ್ತಿದ್ದಾರೆ.

ಕೋಮು ಹಿಂಸಾಚಾರದಲ್ಲಿ ಬ್ಯಾರಿ ಯುವಕನನ್ನು ಕೊಂದ ಪ್ರಕರಣದಲ್ಲಿ ಕೆಲವು ಬಿಲ್ಲವರ ಅಥವಾ ಬಿಲ್ಲವ ಯುವಕನನ್ನು ಕೊಂದ ಪ್ರಕರಣಗಳಲ್ಲಿ ಕೆಲವು ಬ್ಯಾರಿಗಳ ಹೆಸರು ಕೇಳಿಬರುವುದು ಸಾಮಾನ್ಯವೂ ಆಗಿದೆ. ಮಂಗಳೂರು ಜೈಲಿನಲ್ಲಿರುವ ಕೈದಿಗಳ ಪೈಕಿ ಬ್ಯಾರಿ-ಬಿಲ್ಲವ ಯುವಕರ ಸಂಖ್ಯೆಯೇ ಅಧಿಕ.

ಈ ಹಿನ್ನೆಲೆಯಲ್ಲಿ ‘ಕೋಮು ಹಿಂಸೆಯ ರಾಜಕಾರಣಕ್ಕೆ ಬ್ಯಾರಿ-ಬಿಲ್ಲವರು ಬಲಿಪಶುಗಳು’ ಎಂಬ ಶೀರ್ಷಿಕೆಯಡಿ ‘ವಾರ್ತಾಭಾರತಿ’ ಡಿಜಿಟಿಲ್ ಚಾನೆಲ್ ಏರ್ಪಡಿಸಿದ್ದ ‘ಏನ್ ಸಮಾಚಾರ’ ಮಾತುಕತೆ ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಮತ್ತು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಮುನೀರ್ ಕಾಟಿಪಳ್ಳ: ದ.ಕ. ಜಿಲ್ಲೆಯಲ್ಲಿ ಸರಣಿ ಕೊಲೆಗಳಾಗುತ್ತಿವೆ. ಇದರಲ್ಲಿ ಬ್ಯಾರಿ-ಬಿಲ್ಲವ ಯುವಕರ ಪಾಲು ಹೆಚ್ಚಿವೆ. ಆದರೆ ಅಧಿಕಾರ ಪಡೆಯುವವರು ಮಾತ್ರ ಬೇರೆಯವರು ಅಂತ ನಿಮಗೆ ಅನಿಸುವುದಿಲ್ಲವೇ?

ಪದ್ಮರಾಜ್: ಹೌದು. ಸರಣಿ ಕೊಲೆಗಳಾಗುತ್ತಿವೆ. ಕೊಂದವರೂ, ಕೊಲ್ಲಲ್ಪಟ್ಟವರೂ ಬ್ಯಾರಿ-ಬಿಲ್ಲವರೇ ಆಗಿರುತ್ತಾರೆ. ನಿಜಕ್ಕೂ ಇದು ತುಂಬಾ ಬೇಸರದ ಮತ್ತು ನೋವಿನ ಸಂಗತಿ. ಈ ಬಗ್ಗೆ ಎರಡೂ ಸಮದಾಯದ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ.

ಮುನೀರ್ ಕಾಟಿಪಳ್ಳ: ಬಿಲ್ಲವರು ಮತ್ತು ಬ್ಯಾರಿ ಮುಸ್ಲಿಮರು ರಾಜಕೀ ಯವಾಗಿ ಒಟ್ಟಿಗೆ ಇದ್ದಾಗಲೆಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕ, ಬಿಲ್ಲವ ಸಮಾಜದ ಮುಖಂಡ ಜನಾರ್ದನ ಪೂಜಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಯಾವಾಗ ಈ ಬಿಲ್ಲವರು ಮತ್ತು ಬ್ಯಾರಿ ಮುಸ್ಲಿಮರನ್ನು ಕೋಮುವಾದಿ ಶಕ್ತಿಗಳು ವಿಭಜಿಸಲು ಶುರು ಮಾಡಿದವೋ ಆಗಿಂದಲೇ ಜನಾರ್ದನ ಪೂಜಾರಿ ಸೋಲುತ್ತಲೇ ಬಂದರು. ಬಿಲ್ಲವರೇ ಅಧಿಕ ಸಂಖ್ಯೆಯಲ್ಲಿರುವ ದ.ಕ.ಜಿಲ್ಲೆಯಲ್ಲಿ ಬಿಲ್ಲವ ನಾಯಕ ಹೀನಾಯವಾಗಿ ಸೋಲುವುದು ವಿಪರ್ಯಾಸ ಅಲ್ಲವೇ?

ಪದ್ಮರಾಜ್: ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಬ್ಯಾರಿ ಮುಸ್ಲಿಮರು ಮತ್ತು ಬಿಲ್ಲವರನ್ನು ರಾಜಕೀಯವಾಗಿ ಬೇರೆ ಬೇರೆ ಮಾಡಿದುದರ ಫಲವನ್ನು ಇನ್ಯಾರೋ ಉಂಡರು. ಇತ್ತ ಈ ಬ್ಯಾರಿ ಮತ್ತು ಬಿಲ್ಲವರಿಗೆ ರಾಜಕೀಯವಾಗಿ ಮಾತ್ರವಲ್ಲ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿಯೂ ಹಿನ್ನೆಡೆಯಾಗುತ್ತಿದೆ. ನಾವೀಗ ನಮ್ಮ ಸಮಾಜದ ಯುವಕರಲ್ಲಿ ಕೋಟಿ-ಚನ್ನಯರ, ನಾರಾಯಣ ಗುರಗಳ ಆದರ್ಶ ಪಾಲಿಸುವ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಯಾವತ್ತೂ ಉದ್ವೇಗಕ್ಕೆ ಒಳಗಾಗದೆ, ಹತಾಶೆಗೀಡಾಗದೆ ಯಾರದೋ ಮಾತು ಕೇಳಿ ಕೋಮು ಹಿಂಸಾಚಾರಕ್ಕೆ ಸಿಲುಕಿ ಹೆತ್ತವರು, ಕುಟುಂಬಸ್ಥರು ಕಣ್ಣೀರು ಸುರಿಸುವಂತೆ ಮಾಡಬೇಡಿ ಎನ್ನುತ್ತಿದ್ದೇವೆ.

ಮುನೀರ್ ಕಾಟಿಪಳ್ಳ: ಕಣ್ಣೀರು ಎನ್ನುವಾಗ ಒಂದು ಮಾತು ನೆನಪಾಗುತ್ತಿದೆ. ಬೆಳ್ಳಾರೆಯ ಮಸೂದ್, ಪ್ರವೀಣ್ ಮತ್ತು ಮಂಗಳ ಪೇಟೆಯ ಫಾಝಿಲ್‌ರ ಹೆತ್ತವರ ಕಣ್ಣೀರು ಒಂದೇ ಆಗಿರುತ್ತದೆ. ಅವರ ನೋವು ನಮ್ಮ ನೋವೂ ಆಗಿರುತ್ತದೆ. ಆದರೆ ಈ ರಾಜಕಾರಣಿಗಳು ಆ ಕಣ್ಣೀರನ್ನು, ಅವರ ನೋವನ್ನು ಅರ್ಥ ಮಾಡಿಕೊಳ್ಳದೇ ಹೋದರು. ಸರಕಾರವಂತೂ ರಾಜಧರ್ಮ ಪಾಲಿಸದೆ ಪಕ್ಷಪಾತ ಮಾಡಿತು.

ಪದ್ಮರಾಜ್: ಕೋಮುವಾದಿಗಳಿಗೆ ಬೇಕಾದುದು ಕೂಡ ಅದುವೇ ಆಗಿದೆ. ಅವರಿಗೆ ಬಿಲ್ಲವರು-ಬ್ಯಾರಿ ಮುಸ್ಲಿಮರು ಅನ್ಯೋನ್ಯತೆ ಯಿಂದಿರುವುದು ಇಷ್ಟವಿಲ್ಲ. ಹಿಜಾಬ್‌ನಂತಹ ವಿಚಾರವನ್ನು ಜೀವಂತವಾಗಿರಿಸಲು ನೋಡುತ್ತಾರೆ. ಈ ಸಮಸ್ಯೆಯನ್ನು ನಾವು ಮೊದಲೇ ಅರ್ಥ ಮಾಡಿಕೊಂಡು ಮೊಳಕೆಯಲ್ಲೇ ಚಿವುಟಿ ಹಾಕಲು ಮುಂದಾಗಬೇಕು. ಈ ನೆಲದ ಕಾನೂನನ್ನು ಗೌರವಿಸಬೇಕು. ಕೋಮು ವಿಚಾರದ ಬದಲು ಬಡತನ, ಅನಕ್ಷರತೆ, ಅಸಮಾನತೆ, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.

ಮುನೀರ್ ಕಾಟಿಪಳ್ಳ: ಕರಾವಳಿಯಲ್ಲಿ ಬಿಲ್ಲವರು ಮತ್ತು ಬ್ಯಾರಿ ಮುಸ್ಲಿಮರ ಕೊಡುಕೊಳ್ಳುವಿಕೆ ಅತ್ಯುತ್ತಮವಾಗಿತ್ತು. ಇತಿಹಾಸ ಪುರುಷರಾದ ಕೋಟಿ-ಚೆನ್ನಯರ ಜೊತೆ ಬ್ಯಾರಿಗಳು ಸೇರಿಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಬಿಲ್ಲವ ಯುವಕರ ನಡೆ ಆಶ್ಚರ್ಯ ಹುಟ್ಟಿಸುತ್ತಿವೆ. ಅಲ್ವಾ?

ಪದ್ಮರಾಜ್: ಬಿಲ್ಲವ ಮತ್ತು ಬ್ಯಾರಿ ಮುಸ್ಲಿಮರ ಸಂಬಂಧ ಉತ್ತಮವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಬಿಲ್ಲವರು ಪ್ರಾಮಾಣಿಕತೆಗೂ ಹೆಸರುವಾಸಿಯಾಗಿದ್ದಾರೆ. ಆದರೆ ಎರಡೂ ಸಮಾಜದ ಆರ್ಥಿಕವಾಗಿ ಹಿಂದುಳಿದ ಯುವಕರು ದಾರಿ ತಪ್ಪಿರುವುದು ಸಹಜ. ಎರಡೂ ಸಮಾಜದ, ಸಮುದಾಯದ ನಾಯಕರು ಬುದ್ಧಿವಾದ ಹೇಳಿ ಅದನ್ನು ಸರಿಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳಲ್ಲಿ ಬಿಲ್ಲವ ಯುವಕರು ಪಾಲ್ಗೊಳ್ಳುವುದಿಲ್ಲ ಎಂಬ ವಿಶ್ವಾಸವೂ ನನಗಿದೆ.

ಮುನೀರ್ ಕಾಟಿಪಳ್ಳ: ಧರ್ಮದ ಆಧಾರದಲ್ಲಿ ಜಗಳ ಮಾಡುವುದು ಸರಿಯಲ್ಲ ಎಂಬ ವಿಚಾರವು ಮುಸ್ಲಿಮ್ ವಲಯದಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೂ ಹೊಸ ಪೀಳಿಗೆಯ ಯುವಕರು ಆವೇಶ ಭರಿತರಾಗುತ್ತಿದ್ದಾರೆ. ಎಡವುತ್ತಿದ್ದಾರೆ. ನೋಡಿ, ಎರಡು ದಶಕದ ಹಿಂದೆ ಮೊಗವೀರ ಸಮಾಜದಲ್ಲಿ ಇಂತಹ ಆವೇಶ ಕಂಡುಬರುತ್ತಿತ್ತು. ಈಗ ಅವರು ಇಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಎಲ್ಲರ ಜೊತೆ ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸುತ್ತಿದ್ದಾರೆ.

ಪದ್ಮರಾಜ್: ನಾರಾಯಣಗುರುಗಳ ಒಂದು ಮಾತಿದೆ. ಎಲ್ಲರಲ್ಲೂ ದೇವರನ್ನು ಕಾಣು ಅಂತ. ಅದರಂತೆ ಬಿಲ್ಲವರು ಎಲ್ಲರಲ್ಲೂ ದೇವರನ್ನು ಕಾಣಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪಂಕ್ತಿಯೂಟ ಇನ್ನೂ ಚಾಲ್ತಿಯಲ್ಲಿದೆ. ಅದನ್ನು ಹೋಗಲಾಡಿಸುವುದರ ಜೊತೆಗೆ ಸಮಾಜದ ಎಲ್ಲರ ಜೊತೆಯೂ ಸೌಹಾರ್ದದಿಂದ ಬದುಕಲು ತಿಳಿ ಹೇಳುತ್ತಿದ್ದೇವೆ.

ಮುನೀರ್ ಕಾಟಿಪಳ್ಳ: ಜಿಲ್ಲೆಯಲ್ಲಿ ಬ್ಯಾರಿ-ಬಿಲ್ಲವರ ಸಂಖ್ಯೆ ಸಮಾನವಾಗಿದೆ. ಬ್ಯಾರಿ-ಬಿಲ್ಲವರ ಆವೇಶ, ವರ್ತನೆಯೂ ಒಂದೇ ರೀತಿ ಇದೆ. ಬ್ಯಾರಿ-ಬಿಲ್ಲವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದರು. ಆದಾಗ್ಯೂ ಅವರ ಮಧ್ಯೆ ಪರಸ್ಪರ ಪೈಪೋಟಿ, ಸ್ಪರ್ಧಾ ಮನೋಭಾವ ಇರಲಿಲ್ಲ. ಈಗ ಎಲ್ಲೆಡೆ, ಎಲ್ಲಾ ವಿಷಯದಲ್ಲೂ  ಪೈಪೋಟಿ ಎದ್ದು ಕಾಣುತ್ತಿದೆಯಲ್ವ?

ಪದ್ಮರಾಜ್: ಆರ್ಥಿಕವಾಗಿ ಹಿಂದುಳಿದ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವು ಹಿಂದೆ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಆದರೆ ಇತ್ತೀಚೆಗೆ ನಾವು ಅದರತ್ತ ಹೆಚ್ಚು ಗಮನಹರಿಸಿದ್ದೇವೆ. ಇನ್ನು, ಈ ಪೈಪೋಟಿಗೆ ವಿಭಜನೆ ರಾಜಕೀಯವೇ ಕಾರಣವಾಗಿದೆ.

ಮುನೀರ್ ಕಾಟಿಪಳ್ಳ: ಒಂದು ವೇಳೆ ಕೇರಳದಲ್ಲಿ ನಾರಾಯಣಗುರುಗಳು ಸಮಾಜ ಸುಧಾರಿಸಲು ಜಾಗೃತಿ ಮಾಡದೇ ಇರುತ್ತಿದ್ದರೆ ಅಲ್ಲಿ ಮುಸ್ಲಿಮರ, ಕ್ರೈಸ್ತರ ಸಂಖ್ಯೆ ಇನ್ನೂ ಹೆಚ್ಚುತ್ತಿತ್ತೋ ಏನೋ?

ಪದ್ಮರಾಜ್: ನಿಜ. ಅವರು ಪರಿವರ್ತನೆಯ ಕಾರ್ಯಕ್ಕೆ ಕೈ ಹಾಕದಿದ್ದರೆ ಸಮಾಜ ಇನ್ನಷ್ಟು ಹಿಂದಕ್ಕೆ ತಳ್ಳುತ್ತಿತ್ತು. ನಾರಾಯಣ ಗುರುವನ್ನು ಮಂಗಳೂರಿಗೆ ಕರೆತರುವಲ್ಲಿ ಕೊರಗಪ್ಪರು ತುಂಬಾ ಶ್ರಮಿಸಿದ್ದರು. ಆ ಕೊರಗಪ್ಪರ ಜೊತೆ ಬ್ಯಾರಿಗಳ ಅವಿನಾಭಾವ ಸಂಬಂಧ ಜಗಜ್ಜಾ ಹೀರು. ಭವಿಷ್ಯದಲ್ಲಿ ಹಳೆಯ ಆ ದಿನಗಳು ಮರುಕಳಿಸಲಿ ಎಂದು ನಾವು ಆಶಿಸೋಣ.

ಮುನೀರ್ ಕಾಟಿಪಳ್ಳ: ನಾರಾಯಣಗುರು ಸ್ತಬ್ಧಚಿತ್ರ ವಿವಾದವಾದಾಗ ನಾನೂ ಕುದ್ರೋಳಿ ಕ್ಷೇತ್ರಕ್ಕೆ ಹೋಗಿದ್ದೆ. ಆ ವೇಳೆ ಬಿಲ್ಲವ ಯುವಕರು ಹಳದಿ ಶಾಲು ಧರಿಸಿದ್ದರು. ಹಿಜಾಬ್ ವಿಚಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಅದೇ ಯುವಕರ ಹೆಗಲಲ್ಲಿ ಹಳದಿ ಶಾಲು ಮಾಯವಾಗಿ ಕೇಸರಿ ಶಾಲು ಕಂಡುಬಂತು. ಯೋಚಿಸುವ ಬದಲು ಆವೇಶಕ್ಕೆ ಆದ್ಯತೆ ನೀಡಿದರೆ ಹೀಗೆ ಆಗುವುದು ಅಲ್ವಾ?

ಪದ್ಮರಾಜ್: ಹೌದು. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಮಾಜದ, ಸಮುದಾಯದ ಎಲ್ಲರೂ ಅರ್ಥ ಮಾಡಿಕೊಂಡರೆ ಇಂತಹವುಗಳು ಸಮಸ್ಯೆಯೇ ಅಲ್ಲ.

ಪದ್ಮರಾಜ್: ನೋಡಿ, ಇದು ಕೋಮುಹಿಂಸೆಯ ರಾಜಕಾರಣ ಎಂಬುದರಲ್ಲಿ ಸಂಶಯವಿಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಬ್ಯಾರಿ-ಬಿಲ್ಲವರ ಮಧ್ಯೆ ಬಿರುಕು ಮೂಡಿಸುತ್ತಿದ್ದಾರೆ. ಅದನ್ನು ಇನ್ನಾದರು ಅರ್ಥ ಮಾಡಿಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಅಪಾಯವಿದೆ.

ಮುನೀರ್ ಕಾಟಿಪಳ್ಳ: ಹಿಂದೆ ಬ್ಯಾರಿ ಮುಸ್ಲಿಮ್ ಮತ್ತು ಬಿಲ್ಲವರ ಮಧ್ಯೆ ತುಂಬಾ ಅನ್ಯೋನ್ಯತೆ ಇತ್ತು. ನೀವು ಹೇಳಿದಂತೆ ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಈ ಸಂಬಂಧಕ್ಕೆ ಹುಳಿ ಹಿಂಡುತ್ತಿದ್ದಾರೆ. ಬ್ಯಾರಿ-ಮುಸ್ಲಿಮರ ಸಂಬಂಧ ಹದಗೆಟ್ಟರೆ ಅಥವಾ ಕೋಮುಗಲಭೆಯಲ್ಲಿ ಪಾಲ್ಗೊಂಡರೆ ಆಗುವ ಅಪಾಯ ಏನೂಂತ ಎಲ್ಲರಿಗೂ ತಿಳಿದಿದೆ.

ಮುನೀರ್ ಕಾಟಿಪಳ್ಳ: ಕೋಟಿಚನ್ನಯರ ಸೈನ್ಯದಲ್ಲಿ, ರಾಣಿ ಅಬ್ಬಕ್ಕದೇವಿಯ ಸೈನ್ಯದಲ್ಲಿ ಬ್ಯಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಭೂ ಮಾಲಕರ ವಿರುದ್ಧ ಗೇಣಿದಾರರ ಹೋರಾಟದಲ್ಲೂ ಬಿಲ್ಲವ-ಬ್ಯಾರಿಗಳು ಭಾಗಿಯಾಗಿದ್ದರು. ಇದು ಇತಿಹಾಸ. ಇದನ್ನು ಮರೆಯಲು ಸಾಧ್ಯವೇ?

ಪದ್ಮರಾಜ್: ಖಂಡಿತ ಸಾಧ್ಯವಿಲ್ಲ. ನಮ್ಮ ಪೂರ್ವಜರ ಅನ್ಯೋನ್ಯತೆ, ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮುಂದಿನ ದಿನಗಳಲ್ಲಾದರೂ ಜೊತೆಗೂಡಿ ಸಾಗಲು ಪ್ರಯತ್ನಿಸಬೇಕಿದೆ.

ಮಾತುಕತೆಯ ಸಂಪೂರ್ಣ ವೀಡಿಯೊಗಾಗಿ ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ https://www.youtube.com/watch?v=WS_Dede5RKg ಅನ್ನು ವೀಕ್ಷಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News