×
Ad

ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ ಪ್ರಕರಣ: ಭದ್ರತಾ ಲೋಪ ಕಾರಣ ಎಂದ ವರದಿ!

Update: 2022-08-01 19:32 IST

ಬೆಂಗಳೂರು, ಆ.1: ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಅವರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದು, ಇದರಲ್ಲಿ ಕರ್ತವ್ಯಲೋಪ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಉಲ್ಲೇಖ ಮಾಡಿದ್ದು, ಗೃಹ ಸಚಿವರ ನಿವಾಸಕ್ಕೆ ಸೂಕ್ತ ರೀತಿಯಲ್ಲಿ ಭದ್ರತೆ ಕಲ್ಪಿಸದ ಬಗ್ಗೆಯೂ ಹೇಳಿದ್ದಾರೆ. 

ಗೃಹ ಸಚಿವರ ನಿವಾಸದ ಬಳಿ ಸಿಎಆರ್ ಪೊಲೀಸರು ಸೇರಿ ಐವರಿಂದ ಮಾತ್ರ ಭದ್ರತೆಯಿತ್ತು. ಇದೇ ವೇಳೆ, ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಿಎಆರ್ ಕಾನ್‍ಸ್ಟೇಬಲ್ ಜೆಸಿ ನಗರ ಠಾಣೆಗೆ ಮಾಹಿತಿ ನೀಡಿದ ಮೇಲೆ ಪೊಲೀಸರು ಎಚ್ಚರವಾಗಿದ್ದಾರೆ.

ಆದರೆ, ಕಳೆದ ಹತ್ತು ದಿನಗಳ ಹಿಂದೆ ಜೆಸಿ ನಗರ ಇನ್‍ಸ್ಪೆಕ್ಟರ್ ವರ್ಗಾವಣೆ ಆಗಿದ್ದು, ಹೊಸ ಇನ್‍ಸ್ಪೆಕ್ಟರ್ ಇನ್ನೂ ನಿಯೋಜನೆ ಆಗಿರಲಿಲ್ಲ. ಈ ವೇಳೆ ಸಬ್ ಇನ್‍ಸ್ಟೆಕ್ಟರ್ ಗೆ ಜವಾಬ್ದಾರಿ ನೀಡಲಾಗಿತ್ತು. ಎಬಿವಿಪಿ ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಘಟನೆ ನಡೆದಾಗ ಠಾಣೆಯಲ್ಲಿ ಸೂಕ್ತ ಪೊಲೀಸ್ ಸಿಬ್ಬಂದಿ ತಂಡ ಸಹ ಇರಲಿಲ್ಲ ಎಂದೂ ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News