×
Ad

ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣ; ಪ್ರಥಮ ದರ್ಜೆ ಸಹಾಯಕನಿಗೆ 4 ವರ್ಷ ಸಜೆ, 1 ಕೋಟಿ ರೂ. ದಂಡ

Update: 2022-08-01 20:14 IST

ಮಂಗಳೂರು, ಆ.1: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣದಲ್ಲಿ ಪ್ರಥಮ ದರ್ಜೆ ಸಹಾಯಕನಿಗೆ ಮಂಗಳೂರಿನ ನ್ಯಾಯಾಲಯವು 4 ವರ್ಷಗಳ ಸಾದಾ ಸಜೆ ಮತ್ತು 1 ಕೋ.ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. 

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಉಪ್ಪಿನಂಗಡಿ ನಿವಾಸಿ ಯು.ಓಂಪ್ರಕಾಶ್ ಹೆಗ್ಡೆ ಶಿಕ್ಷೆಗೊಳಗಾದ ಆರೋಪಿ. ಈತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಬಗ್ಗೆ 2014ರ ಜ.28ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಆರೋಪಿಗೆ 4 ವರ್ಷಗಳ ಸಾದಾ ಸಜೆ ಮತ್ತು 1 ಕೋ.ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲನಾದರೆ ಮತ್ತೆ 1 ವರ್ಷ ಸಾದಾ ಸಜೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾಗಿದ್ದು ಪ್ರಸ್ತುತ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿರುವ ಎಸ್.ವಿಜಯ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ. ಆರೋಪಿಯು ಪ್ರಸ್ತುತ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News