ಸುಳ್ಯದ ಕಲ್ಮಕಾರು ಪ್ರದೇಶದಲ್ಲಿ ಗುಡ್ಡ ಕುಸಿತ; ಸೇತುವೆ, ಕೃಷಿ ಪ್ರದೇಶಗಳಿಗೆ ಹಾನಿ
ಸುಳ್ಯ: ತಾಲೂಕಿನ ಕಲ್ಮಕಾರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಸೇತುವೆ ಮತ್ತು ಕೃಷಿ ಪ್ರದೇಶಗಳಿಗೆ ಅಪಾರ ಹಾನಿ ಸಂಭವಿಸಿದೆ.
ರವಿವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಕಲ್ಮಕಾರು ಎಸ್ಟೇಟ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ, ಮಣ್ಣು ಮಿಶ್ರಿತ ನೀರಿನೊಂದಿಗೆ ಮರಗಳು ಉರುಳಿ ಬಂದಿದೆ. ಕಲ್ಮಕಾರು ಎಸ್ಟೇಟ್ ಸಂಪರ್ಕ ಕಡಿತವಾಗಿದೆ. ತಡರಾತ್ರಿ ಸುಮಾರು 2 ಗಂಟೆಗೆ ಭಾರೀ ಮಳೆ ಆರಂಭವಾಗಿತ್ತು. ಆರಂಭದಲ್ಲಿ ಕಲ್ಮಕಾರು ಎಸ್ಟೇಟ್ ಪ್ರದೇಶದಲ್ಲಿ ನೀರು ಹರಿಯಲು ಆರಂಭವಾಗಿತ್ತು. ಇದೇ ವೇಳೆಗೆ ಸಮೀಪದ ಜನರಿಗೆ ಸದ್ದು ಕೇಳಿ ಬಂದಿದೆ. ಆದರೆ ಮಳೆಯ ಕಾರಣದಿಂದ ಹೊರಗಡೆ ಹೋಗಿರಲಿಲ್ಲ. ಕೃಷಿ ತೋಟದ ಪೂರ್ತಿ ಕಲುಷಿತ ನೀರು ಹಾಗೂ ಕೊಚ್ಚಿಕೊಂಡು ಬಂದ ಮರ, ಕಲ್ಲುಗಳು ಬಿದ್ದುಕೊಂಡಿದೆ.
ರವಿವಾರ ತಡರಾತ್ರಿ ಸಂಪಾಜೆ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಸಂಪಾಜೆಯ ಹೈಸ್ಕೂಲ್ ರೋಡ್ ಸಮೀಪವಿರುವ ಗಣೇಶ್ ಅನ್ನುವವರ ಮನೆ ಹಾಗೂ ಗ್ಯಾರೇಜ್‍ಗೆ ಹೊಳೆ ನೀರು ನುಗ್ಗಿದೆ. ಉಳಿದಂತೆ ಅದೇ ಮನೆಯ ಸಮೀಪವಿರುವ ಶ್ರೀಜಿತ್ ಅವರ ಮನೆಗೂ ನೀರು ನುಗ್ಗಿದೆ. ಅಲ್ಲದೆ ಕಲ್ಲುಗುಂಡಿಯ ಆಟೋ ಚಾಲಕ ಸುಧಾಕರ್ ಅವರ ಮನೆಗೂ ನೀರು ನುಗ್ಗಿದ್ದು ತಡರಾತ್ರಿ ಮನೆ ಮಂದಿಯೆಲ್ಲ ಆತಂಕಕ್ಕೆ ಒಳಗಾದ ಘಟನೆ ನಡೆಯಿತು.
ರವಿವಾರ ಸಂಜೆ ಸುರಿದ ಮಳೆಗೆ ಮಳೆ ನೀರು ರಸ್ತೆಯಲ್ಲಿ ಹರಿದು ಬೆಳ್ಳಾರೆ, ಬಾಳಿಲ ಸೇರಿದಂತೆ ಹಲವೆಡೆ ಸ್ವಲ್ಪ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಾಳಿಲ ಕಾಂಚೋಡು ರಸ್ತೆ ತಿರುವಿನಲ್ಲಿ ಸುಮಾರು ದೂರದ ವರೆಗೆ ಮಳೆಯ ರಭಸಕ್ಕೆ ನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆಯ ಮೇಲೆಯೇ ಹರಿದಿತ್ತು.
ಭಾರೀ ಮಳೆಗೆ ಭಾಗಮಂಡಲ-ಕರಿಕೆ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯಲ್ಲಿ ಕರಿಕೆ-ಭಾಗಮಂಡಲ ಮಧ್ಯೆ ಹಲವು ಕಡೆಗಳಲ್ಲಿ ಸೋಮವಾರ ಭೂಕುಸಿತ ಉಂಟಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.