ಫಾಝಿಲ್ ಕೊಲೆ ಆರೋಪಿಗಳ ರಾಜಕೀಯ ಹಿನ್ನಲೆ ಬಹಿರಂಗ ಪಡಿಸದಿರುವುದು ಯಾಕೆ ?: ಮುನೀರ್‌ ಕಾಟಿಪಳ್ಳ ಪ್ರಶ್ನೆ

Update: 2022-08-02 17:20 GMT
ಮುನೀರ್‌ ಕಾಟಿಪಳ್ಳ

ಸುರತ್ಕಲ್, ಆ.2: ಫಾಝಿಲ್ ಕೊಲೆಯ ಮರು ದಿನದಿಂದ ಸುರತ್ಕಲ್ ಪರಿಸರದಲ್ಲಿ ಹರಡಿದ್ದ ವದಂತಿಗಳು ನಿಜವಾಗಿದೆ. ಬಿಜೆಪಿ, ಪರಿವಾರದಲ್ಲಿ ಗುರುತಿಸಿಕೊಂಡಿದ್ದ 6 ಕ್ರಿಮಿನಲ್ ಗಳ ಬಂಧನವಾಗಿದೆ. ಫಾಝಿಲ್ ಕೊಲೆಯನ್ನು ಬಂಧಿತರೆ ನಡೆಸಿರುವುದರ ಕುರಿತು ಯಾರಿಗೂ ಅನುಮಾನಗಳಿಲ್ಲ. ಪೊಲೀಸರು ಇಲ್ಲಿಯವರಗೆ ಸರಿಯಾದ ಕಡೆಗೇ ತಲುಪಿದ್ದಾರೆ. ಆದರೆ ಜನರಲ್ಲಿ ಕೆಲವೊಂದು ಪ್ರಶ್ನೆಗಳು ಮೂಡಿವೆ‌ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಹೇಳಿದ್ದಾರೆ.

ಕೊಲೆಗಡುಕರು ಫಾಝಿಲ್ ನನ್ನೇ ಹುಡುಕಿಕೊಂಡು ಬಂದರೆ ? ಹೌದು ಅಂತಾದರೆ ಯಾವ ಕಾರಣಕ್ಕೂ "ಟಾರ್ಗೆಟ್" ಮಾಡಲು ಸಾಧ್ಯವಿಲ್ಲದ ಒಳ್ಳೆಯ ಗುಣ ನಡತೆಯ ಸಾಮಾನ್ಯ ಹುಡುಗನನ್ನು ಜನಜಂಗುಳಿಯ ಮಧ್ಯೆ ಹುಡುಕಿ ಹೊಡೆದದ್ದು ಯಾಕೆ ?

ಬಂಧಿತರು ಜಾಗರಣ ವೇದಿಕೆ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆಯೂ ರಾಜಕೀಯ ಪ್ರೇರಿತ ಮತೀಯ‌ ದ್ವೇಷದ ಕೊಲೆ, ಹಲ್ಲೆಗಳಲ್ಲಿ ಭಾಗಿಯಾಗಿರುವುದು, ತಮ್ಮ ಕಮ್ಯುನಲ್, ಕ್ರಿಮಿನಲ್ ಚಟುವಟಿಕೆಗಳಿಗೆ ಬಿಜೆಪಿಯ ರಾಜಕೀಯ ಆಶ್ರಯ ಹೊಂದಿರುವುದು ಸುರತ್ಕಲ್ ಪರಿಸರದ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಹಾಗಿರುತ್ತಾ ಪೊಲೀಸರು ಇವರ ರಾಜಕೀಯ ಹಿನ್ನಲೆಯ ಕುರಿತಾದ ಮಾಹಿತಿ ಬಹಿರಂಗ ಪಡಿಸದಿರುವುದು ಯಾಕೆ ?

ಫಾಝಿಲ್ ಕೊಲೆಗೆ ಎರಡು ದಿನಗಳ ಮೊದಲೇ ಅಜಿತ್ ಕ್ರಾಸ್ತಾನಿಂದ ಬಂಧಿತರು ಕಾರು ಬಾಡಿಗೆ ಪಡೆದಿರುವುದಾಗಿ ಸುದ್ದಿ ಇದೆ. ಈ ಕೊಲೆಗೆ ಪೂರ್ವ ತಯಾರಿ ನಡೆದಿರುವುದಕ್ಕೆ ಇದು ಸಾಕ್ಷಿ. ರಾಜಕೀಯ ಬೆಂಬಲ ಇಲ್ಲದೆ ರಾಜಕೀಯ ಮಹತ್ವವುಳ್ಳ ಈ ಕೊಲೆ ನಡೆದಿರಲಾರದು. ಪಿತೂರಿಗಾರರು, ರಾಜಕೀಯ ಆಶ್ರಯದಾತರು, ಕೊಲೆಗೆ ಛೂ ಬಿಟ್ಟವರನ್ನು ಬಂಧಿಸಬೇಡವೆ ? ತನಿಖಾಧಿಕಾರಿಗಳ ಕೈ ಅಲ್ಲಿಯವರಗೆ ತಲುಪುವುದು ಯಾವಾಗ ? ಎಂದು ಪ್ರಶ್ನಿಸಿದ್ದಾರೆ.

ಫಾಝಿಲ್ ಕೊಲೆಯಾಗಿ ಎರಡು ಗಂಟೆಯ ನಂತರ (ರಾತ್ರಿ ಹತ್ತು ಗಂಟೆಗೆ) ಏಕಕಾಲದಲ್ಲಿ ವಿಎಚ್ ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಭಜರಂಗ ದಳ ಸಂಚಾಲಕ ಪ್ರದೀಪ್ ಸರಿಪಳ್ಳ ಪ್ರವೀಣ್ ನೆಟ್ಯಾರು ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ (ನಿನಗಿದೊ ಶ್ರದ್ಧಾಂಜಲಿ) ಪೋಸ್ಟ್ ಅನ್ನು ಫೇಸ್ ಬುಕ್ ನಲ್ಲಿ ಹಾಕುತ್ತಾರೆ. ಪ್ರವೀಣ್ ನೆಟ್ಯಾರು ಹತ್ಯೆಗೀಡಾಗಿ ನಾಲ್ಕು ದಿನದ ನಂತರ, ಫಾಝಿಲ್ ಕೊಲೆಯ ಸುದ್ದಿ ದೃಢ ಪಟ್ಟ ಗಳಿಗೆಯಲ್ಲೇ ಪ್ರವೀಣ್ ಅವರಿಗೆ ಶ್ರದ್ಧಾಂಜಲಿ ಪೋಸ್ಟ್ ಅನ್ನು "ಫಯರ್ ಬ್ರಾಂಡ್" ನಾಯಕರು ಹಾಕಿರುವುದರ ಸಂದೇಶ ಏನು ? ಪೊಲೀಸ್ ಹಿರಿಯ ಅಧಿಕಾರಿಗಳು ಈ ಕುರಿತು ಕಣ್ಣು ಮುಚ್ಚಿರುವುದು ಯಾಕೆ ? ಫಾಝಿಲ್ ಕೊಲೆಗೈದ  ಬಜರಂಗ ದಳ, ಬಿಜೆಪಿ ನಂಟಿನ ಕ್ರಿಮಿನಲ್ ಗಳಿಗೂ ಈ "ನಾಯಕ" ರಿಗೂ, ಅವರು ಹಾಕಿದ ಪೋಸ್ಟ್ ಗೂ ಇರುವ ಸಂಬಂಧ ಏನು‌ ?

ಇದು ಕೋಮು ಸಂಘರ್ಷದಿಂದ ಬಸವಳಿದಿರುವ ಮಂಗಳೂರು ನಾಗರಿಕರ ಮುಂದಿರುವ ಫಾಝಿಲ್ ಕೊಲೆಗೆ ಸಂಬಂಧಿಸಿದ ಅನುಮಾನಗಳು. ಸಂಬಂಧ ಪಟ್ಟವರು ಪರಿಶೀಲಿಸಬೇಕು ಎಂದು‌ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News