VIDEO- ಸುಳ್ಯ : ನೀರಿಗೆ ಬಿದ್ದ ಶರೀಫ್ ಅನ್ನು ಜೀವದ ಹಂಗು ತೊರೆದು ರಕ್ಷಿಸಿದ ಸೋಮಶೇಖರ್

Update: 2022-08-02 18:42 GMT

ಸುಳ್ಯ, ಆ. 2: ಭಾರೀ ಮಳೆಯಿಂದ ಹರಿಹರ ಪಲ್ಲತ್ತಡ್ಕದಲ್ಲಿ ರಾಶಿ ಬಿದ್ದ ಮರದ ದಿಮ್ಮಿಗಳನ್ನು ತೆರವು ಮಾಡುತ್ತಿದ್ದ ಕ್ರೇನ್‌ ಆಪರೇಟರ್‌ ಓರ್ವರು ಹೊಳೆಯ ಪಕ್ಕದಲ್ಲಿ ನಿಂತಿದ್ದ ವೇಳೆ ನೀರಿಗೆ ಬಿದ್ದಿದ್ದು, ಈ ವೇಳೆ ಯುವಕನೋರ್ವ ನದಿಗೆ ಹಾರಿ ಅವರನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.

ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಶರೀಫ್ ಎಂಬವರ ಕ್ರೇನ್ ಹಾಗೂ ಸ್ಥಳೀಯ ನಿವಾಸಿಯೋರ್ವರ ಜೆಸಿಬಿ ವಾಹನಗಳನ್ನು ತರಿಸಲಾಗಿತ್ತು. ಕಾರ್ಯಾಚರಣೆಯ ವೇಳೆ ಆಪರೇಟರ್ ಶರೀಫ್ ಕ್ರೇನ್ ನಿಂದ ಇಳಿದು ಹೊಳೆ ಪಕ್ಕದಲ್ಲಿ ನಿಂತಿದ್ದಾಗ ಮರದ ದಿಮ್ಮಿಯೊಂದು ತಾಗಿದ ಪರಿಣಾಮ ಹರಿಯುತ್ತಿರುವ ನೀರಿಗೆ ಶರೀಫ್‌ ಬಿದ್ದಿದ್ದರು.

ಈ ವೇಳೆ ಹರಿಹರ ನಿವಾಸಿ ಸೋಮಶೇಖರ್ ಕಟ್ಟೆಮನೆ ಎಂಬವರು ಪ್ರಾಣಾಪಾಯವನ್ನು ಲೆಕ್ಕಿಸದೇ ಹೊಳೆಗೆ ಜಿಗಿದು ಶರೀಫ್ ರನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಊರಿನ ಇತರರು ಸೇರಿ ಶರೀಫ್ ರನ್ನು ಮೇಲಕ್ಕೆತ್ತಿದ್ದಾರೆ.

ತುಂಬಿ ಹರಿಯುತ್ತಿದ್ದ ನದಿಗೆ ಧುಮುಕಿದ ಸೋಮಶೇಖರ್ ಕಟ್ಟೆಮನೆಯವರ ಸಾಹಸವನ್ನು ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ್ ಪಂಜ ಅವರು ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲೆಯ ಅಲ್ಲಲ್ಲಿ ಹಾಗು ಸುಳ್ಯ ತಾಲೂಕಿನಲ್ಲಿ ನಡೆದಿರುವ ಅಹಿತಕರ ಘಟನೆಯ ಬೆನ್ನಿಗೆ ಈ ಘಟನೆಯನ್ನು ಉಲ್ಲೇಖಿಸಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News