ಕೊಲೆಯಾದ ಫಾಝಿಲ್‌ ಮನೆಗೆ ದ.ಕ.ಜಿಲ್ಲಾಡಳಿತ, ಜನಪ್ರತಿನಿಧಿಗಳು ಇನ್ನೂ ಭೇಟಿ ನೀಡಿಲ್ಲ : ಸ್ಥಳೀಯರು

Update: 2022-08-03 15:35 GMT
ಮುಹಮ್ಮದ್ ಫಾಝಿಲ್

ಮಂಗಳೂರು, ಆ‌. 3: ಇಲ್ಲಿನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಹತ್ಯೆಯ ಬಳಿಕ ಜಿಲ್ಲಾಡಳಿತ, ಜನಪ್ರತಿನಿಧಿ, ಸರಕಾರದ ಪ್ರತಿನಿಧಿಗಳು ಸೇರಿ ಯಾರೊಬ್ಬರೂ ಫಾಝಿಲ್ ಕುಟುಂಬವನ್ನು ಸೌಜನ್ಯಕ್ಕೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮಂಗಳಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಅವರು, ಮಂಗಳಪೇಟೆ ಹಿಂದೂ ಮುಸ್ಲಿಮರು ಶಾಂತಿ ಸೌಹಾರ್ದ ದಲ್ಲಿರುವ ಊರು. ಇಲ್ಲಿನ ಅಮಾಯಕ ಯುವಕ ಫಝಿಲ್ ನ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಆದರೆ ಅವರು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಲೆ ನಡೆದ ಬಳಿಕ ಮುಸ್ಲಿಂ ಜಮಾಅತ್ ಕಮಿಟಿಯ ಜೊತೆಗೆ ಜಮಾಅತ್ ಪ್ರಮುಖರು ತೆರಳಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಪರಿಹಾರವನ್ನು ವಿತರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಯವರು ಫಾಝಿಲ್ ಅವರ ನಿವಾಸಕ್ಕೆ ಭೇಟಿ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ, ಫಾಝಿಲ್ ಕೊಲೆ ನಡೆದು ಒಂದು ವಾರವಾಗುತ್ತಾ ಬರುತ್ತಿದೆ.‌ ಇದುವರೆಗೂ ಜಿಲ್ಲಾಧಿಕಾರಿ, ಜಿಲ್ಲಾಡಳಿತದ ಪ್ರತಿನಿಧಿಗಳು ಕೊಲೆಯಾದ ಫಾಝಿಲ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಮತ್ತು ಪರಿಹಾರದ ಬಗ್ಗೆ ಚಕಾರವೆತ್ತಿಲ್ಲ ಎಂದು ಹೇಳಿದ್ದಾರೆ.

ಈ ಭಾಗದ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡ ಕನಿಷ್ಠ ಮೃತರ ಮನೆಗೆ ಭೇಟಿ ನೀಡುವ ಸೌಜನ್ಯವನ್ನೂ ತೋರಿಲ್ಲ. ಇಲ್ಲಿನ ಜಿಲ್ಲಾಡಳಿತ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸರಕಾರದ ಯಾವ ಬ್ಬರಿಗೂ ಮರಣದ ಮನೆಗೆ ಭೇಟಿ ನೀಡುವಷ್ಟು ಮನುಷ್ಯತ್ವವೂ ಇಲ್ಲದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೋರ್ವ ಸ್ಥಳೀಯ ಹಾಗೂ ಬಿಜೆಪಿ ಕಾರ್ಯಕರ್ತರಾದ ಮೊಯ್ದಿನಬ್ಬ ಅವರು ಮಾತನಾಡಿ, ಅಮಾಯಕ ಫಾಝಿಲ್ ನ ಹತ್ಯೆ ಬೆಳ್ಳಾರೆಯ ಪ್ರವೀಣ್ ಅವರ ಹತ್ಯೆಗೆ ಪ್ರತೀಕಾರವಾಗಿ ಮಾಡಲಾಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿಸಿದೆ. ಆದರೂ ಜಿಲ್ಲಾಡಳಿತವಾಗಲೀ, ಜನಪ್ರತಿನಿಧಿಗಳಾಗಲಿ ಹತ್ಯೆಗೀಡಾದ ಫಾಝಿಲ್ ನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಜೊತೆಗೆ ಪರಿಹಾರವನ್ನು ನೀಡುವ ಗೋಜಿಗೆ ಹೋಗದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ನೇರವಾಗಿ ಪ್ರಶ್ನೆ ಮಾಡಿದ ಬಿಜೆಪಿ ಕಾರ್ಯಕರ್ತ ಮೊಯ್ದಿನಬ್ಬ ಅವರು "ತಾವು ಹಿಂದೂಗಳಿಗೆ ಮಾತ್ರ ಶಾಸಕರೇ ಅಥವಾ ಇಡೀ ಮುಲ್ಕಿ - ಮೂಡಬಿದಿರೆಗೂ ಶಾಸಕರಲ್ಲವೆ?. ಹಾಗಿರುವಾಗ ಧ್ವೆಷದ‌ ಕಾರಣಕ್ಕಾಗಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ‌ ಅಮಾಯಕ ಫಾಝಿಲ್ ನ ಮನೆಗೆ ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಗ್ರಾಮಸ್ಥರು ನಮ್ಮ‌ ಶಾಸಕರ ಭೇಟಿಯ ಕುರಿತು ಕೇಳುವಾಗ ಮುಜುಗರವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News