ಸುಳ್ಯ; ಕೊಯನಾಡು ಸಮೀಪ ಮಾಣಿ-ಮೈಸೂರು ರಸ್ತೆಯ ಮಧ್ಯೆ ಬಿರುಕು: ಸಂಪರ್ಕ ಕಡಿತದ ಆತಂಕ

Update: 2022-08-03 16:34 GMT

ಸುಳ್ಯ: ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಬಳಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯೆ ಭಾರೀ ಪ್ರಮಾಣದಲ್ಲಿ ಬಿರುಕು ಉಂಟಾಗಿದ್ದು, ಮಾಣಿ-ಮೈಸೂರು ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಠಿಯಾಗಿದೆ.

ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಸದ್ಯ ಮುಂಜಾಗರೂಕತೆಯ ಕ್ರಮವಾಗಿ  ಈ ಹೆದ್ದಾರಿಯಲ್ಲಿ ಘನ  ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಸ್ಥಿತಿಯನ್ನು  ಪರಿಶೀಲನೆ ನಡೆಸಿದ್ದಾರೆ. ದೇವರಕೊಲ್ಲಿ ಹಾಗೂ ಕೊಯನಾಡು ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಬಿರುಕು ಕಾಣಿಸಿಕೊಂಡಿದೆ. ವಾಹನಗಳು ಈ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ.

2018ರಲ್ಲಿ ಇದೇ ಭಾಗದ ಜೋಡುಪಾಲ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ಭಾರೀ ಅನಾಹುತ ಸಂಭವಿಸಿ. 2- 3 ಕಡೆ ಹೆದ್ದಾರಿಯ ಸಂಪರ್ಕವೇ ಕಡಿದುಕೊಂಡಿತ್ತು. ಆ.2ರಂದು ರಾತ್ರಿ ಈ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ರಸ್ತೆಯ ಪಕ್ಕದಲ್ಲೇ ಇರುವ ಹಳೆಯ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ತಿ ಪಡಿಸಲಾಗುತ್ತಿದೆ. ಇನ್ನೂ ಮಳೆಯ ಪ್ರಮಾಣ ಹೆಚ್ಚಾದರೆ ಸುಳ್ಯ - ಮಡಿಕೇರಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News