ಸರಿಯಾಗಿ ಹೊಲಿಯದ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಿದ ರಾಜ್ಯ ಬಿಜೆಪಿ ಕಚೇರಿ
ಬೆಂಗಳೂರು: ಭಾರತೀಯ ಧ್ವಜ ಸಂಹಿತೆಯನ್ನು ಉಲ್ಲಂಘಿಸಿ ವಿರೂಪಗೊಳಿಸಿರುವ ಹಾಗೂ ಸರಿಯಾಗಿ ಹೊಲಿಯದ ತ್ರಿವರ್ಣ ಧ್ವಜಗಳನ್ನು ರಾಜ್ಯ ಬಿಜೆಪಿ ತನ್ನ ಕರ್ನಾಟಕ ಕೇಂದ್ರ ಕಚೇರಿಯಲ್ಲಿ ಮಾರಾಟ ಮಾಡುತ್ತಿದೆ ಎಂದು deccanherald.com ವರದಿ ಮಾಡಿದೆ.
ಜುಲೈ 31 ರಂದು ಸಚಿವ ಎಸ್. ಟಿ .ಸೋಮಶೇಖರ್ ಅವರು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ತ್ರಿವರ್ಣ ಧ್ವಜವನ್ನು ಮಾರಾಟ ಮಾಡಲು ಸ್ಟಾಲ್ ಅನ್ನು ಉದ್ಘಾಟಿಸಿದರು.
ಮಲ್ಲೇಶ್ವರಂನಲ್ಲಿರುವ ತನ್ನ ರಾಜ್ಯ ಕೇಂದ್ರ ಕಚೇರಿಯಿಂದ 10 ಲಕ್ಷ ಸೇರಿದಂತೆ ಕರ್ನಾಟಕದಾದ್ಯಂತ 75 ಲಕ್ಷ ಧ್ವಜಗಳನ್ನು ವಿತರಿಸುವ ಗುರಿಯನ್ನು ಬಿಜೆಪಿ ಹೊಂದಿದೆ.
ಕೇಂದ್ರ ಸರಕಾರವು ಡಿಸೆಂಬರ್ 30, 2021 ರಂದು ಭಾರತದ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿ ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪಾಲಿಸ್ಟರ್ ಹಾಗೂ ಯಂತ್ರ ನಿರ್ಮಿತ ರಾಷ್ಟ್ರಧ್ವಜಗಳ ಉತ್ಪಾದನೆಗೆ ಅನುಮತಿ ನೀಡಿದೆ.
ಇದನ್ನೂ ಓದಿ: ಆರೆಸ್ಸೆಸ್ ಪ್ರಧಾನ ಕಚೇರಿಯಲ್ಲಿ 52 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ: ರಾಹುಲ್ ಗಾಂಧಿ
ಧ್ವಜ ಸಂಹಿತೆಯ ಪ್ರಕಾರ, ತ್ರಿವರ್ಣ ಧ್ವಜವು ಆಯತಾಕಾರದಲ್ಲಿರಬೇಕು. ಇದು "ಯಾವುದೇ ಗಾತ್ರದ್ದಾಗಿರಬಹುದು. ಆದರೆ ಧ್ವಜದ ಉದ್ದ ಹಾಗೂ ಅಗಲದ ಅನುಪಾತವು 3:2 ಆಗಿರಬೇಕು". ಎರಡನೆಯದಾಗಿ ಅಶೋಕ ಚಕ್ರವನ್ನು ಸರಿಯಾಗಿ ಮಧ್ಯದಲ್ಲಿ ಇಡಬೇಕು. ಮೂರನೆಯದಾಗಿ, ಮೂರು ಪಟ್ಟಿಗಳ ಗಾತ್ರ (ಕೇಸರಿ, ಬಿಳಿ, ಹಸಿರು) ಸಮಾನವಾಗಿರಬೇಕು.
ಡೆಕ್ಕನ್ ಹೆರಾಲ್ಡ್ ತಂಡವು ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಮಾರಾಟವಾಗುತ್ತಿರುವ ಅನೇಕ ಧ್ವಜಗಳು ಆಯತಾಕಾರದ ಅಥವಾ 3:2 ಅನುಪಾತಕ್ಕೆ ಅನುಗುಣವಾಗಿಲ್ಲದಿರುವುದು ಕಂಡು ಬಂದಿದೆ. ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ಮಧ್ಯಭಾಗದಲ್ಲಿರಲಿಲ್ಲ. ಇನ್ನು ಕೆಲವು ಧ್ವಜಗಳಲ್ಲಿ ಹಸಿರು ಪಟ್ಟಿಗಳು ಕೇಸರಿ ಹಾಗೂ ಬಿಳಿ ಪಟ್ಟಿಗಿಂತ ದೊಡ್ಡದಾಗಿದ್ದವು.
ಗುಣಮಟ್ಟ ಎಷ್ಟು ಕಳಪೆಯಾಗಿದೆಯೆಂದರೆ ಧ್ವಜದ ಮೇಲೆಯೇ ಹೊಲಿಗೆ ಹಾಕಲಾಗಿದ್ದು, ಧ್ವಜವನ್ನು ಕೋಲಿಗೆ ಸಿಕ್ಕಿಸಲೂ ಆಗುತ್ತಿಲ್ಲ.
ಇಷ್ಟಾಗಿಯೂ ಇವುಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಪ್ರತಿ ಧ್ವಜಕ್ಕೆ 25 ರೂ. ನಗದು ನೀಡಿಯೇ ಖರೀದಿಸಬೇಕು. ಯುಪಿಐ ಅಥವಾ ಕಾರ್ಡ್ ಮೂಲಕ ಪಾವತಿಗೆ ಅವಕಾಶವಿಲ್ಲ. ಯಾವುದೇ ರಷೀದಿಯನ್ನೂ ನೀಡುವುದಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ನಾವು ಖರೀದಿಸಿದ ಬೆಲೆಗೇ ಮಾರುತ್ತಿದ್ದೇವೆ. ಅದರ ಸಾರಿಗೆ ವೆಚ್ಚವನ್ನೂ ನಾವು ಸೇರಿಸಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ನನ್ನ- ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಿದ್ದರಾಮಯ್ಯ