ಬೆಂಗಳೂರಿನಲ್ಲಿ ಭಾರಿ ಮಳೆ; ಮನೆಯ ಗೋಡೆ ಕುಸಿತ

Update: 2022-08-04 08:05 GMT

ಬೆಂಗಳೂರು, ಆ. 4: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇದರ ಪರಿಣಾಮ ಮನೆಯೊಂದರ ಗೋಡೆ ಕುಸಿತ ಘಟನೆ ಬೆಳಕಿಗೆ ಬಂದಿದೆ.

ಸಂಪಗಿರಾಮ ನಗರದಲ್ಲಿ ರಾತ್ರಿಯ ಮಳೆಗೆ ಮನೆಯ ಸಂಪೂರ್ಣ ಗೋಡೆ ಕುಸಿತವಾಗಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ. ಮಳೆ ನೀರಿನಿಂದ ಎಚ್ಚೆತ್ತ ಕುಟುಂಬ ಸದಸ್ಯರು ತಕ್ಷಣ ಮನೆಯಿಂದ ಆಚೆ ಬಂದಿದ್ದು, ಭಾರೀ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮನೆ ಮಾಲಕ ಚಂದ್ರು, ಮೂರು ದಿನಗಳಿಂದ ಸತತ ಮಳೆಯಿಂದಾಗಿ ಬೆಳಗ್ಗೆ ಸುಮಾರು 9.30ಕ್ಕೆ ಮನೆ ಕುಸಿದಿದೆ. ಮನೆ ಕುಸಿಯುವ ವೇಳೆ ಮಗ ಮನೆಯಲ್ಲಿ ಮಲಗಿದ್ದ. ಗೋಡೆ ಬೀಳುವ ಶಬ್ದ ಕೇಳಿ ಆಚೆ ಬಂದಿದ್ದಾನೆ ಎಂದರು. ಇಲ್ಲಿಯವರೆಗೂ ಬಿಬಿಎಂಪಿ  ಅಧಿಕಾರಿಗಳು , ಶಾಸಕರು ಯಾರು ಭೇಟಿ ನೀಡಿ ಸಮಸ್ಯೆ ಕೇಳಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೌಕರನಿಗೆ ಗಾಯ: ಮತ್ತೊಂದು ಘಟನೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ರಸ್ತೆ ಹೊಳೆಯಂತಾಗಿವೆ. ರಸ್ತೆಯಲ್ಲಿ ಸಂಚರಿಸುವಾಗ ನೀರು ಜಾಸ್ತಿ ರಸ್ತೆಗೆ ಬಂದ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯವಾಗಿದ್ದಾರೆ.

ವೆಂಕಟೇಶ್ ಎಂಬ ಸರ್ಕಾರಿ ನೌಕರ ನಿನ್ನೆ ಕೆಲಸ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ. ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಅವರಿಗೆ ಹಿಮ್ಮಡಿ ಭಾಗ ಒಡೆದು ಹೋಗಿ 22 ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News