ಮುಂದಿನ 25 ವರ್ಷಗಳಲ್ಲಿ ಭಾರತದ ಪ್ರಗತಿ ಬಗ್ಗೆ ಸಂಕಲ್ಪ: ಕೇಂದ್ರ ಗೃಹ ಸಚಿವ ಅಮಿತ್ ಶಾ

Update: 2022-08-04 12:03 GMT
photo credit- twitter

ಬೆಂಗಳೂರು, ಆ.4: ದೇಶವು ಸ್ವಾತಂತ್ರ್ಯದ 75ನೆ ವರ್ಷಾಚರಣೆ ಅಂಗವಾಗಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಆಚರಣೆ ಮಾಡುತ್ತಿದೆ. ಅದರ ಜೊತೆಗೆ, ಮುಂದಿನ 25 ವರ್ಷಗಳಲ್ಲಿ ಭಾರತದ ಪ್ರಗತಿ ಹೇಗಿರಬೇಕು ಎಂಬ ಸಂಕಲ್ಪವನ್ನು ನಾವು ಈಗ ಮಾಡಬೇಕಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಕರೆ ನೀಡಿದರು.

ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ವತಿಯಿಂದ ಆಯೋಜಿಸಲಾಗಿದ್ದ ‘ಸಂಕಲ್ಪದಿಂದ ಸಿದ್ದಿ’ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗಿವೆ, ಮುಂದೆ 100 ವರ್ಷಗಳ ಸಂಭ್ರಮವು ಆಗುತ್ತದೆ. ಆ ಸಂದರ್ಭದಲ್ಲಿ ಈ ವೇದಿಕೆಯಲ್ಲಿ ಇರುವವರ ಪೈಕಿ ಬಹುತೇಕರು ಇಲ್ಲದೆ ಇರಬಹುದು. ಆದರೆ, ದೇಶ ಇರುತ್ತೆ. ಆದುದರಿಂದ, ನಾವು ಈಗ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುವ ಸಂಕಲ್ಪ ಮಾಡಬೇಕು, ದೇಶ 100 ವರ್ಷಗಳ ಸ್ವಾತಂತ್ರ್ಯ ಸಂಭ್ರಮ ಆಚರಿಸುವಾಗ ದೇಶ ಎಲ್ಲಿರಬೇಕು, ಏನು ಸಾಧನೆ ಮಾಡಿರಬೇಕು, ವಿಶ್ವದ ನೇತೃತ್ವವನ್ನು ಭಾರತ ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ನಾವು ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಹಾಗೂ ಸಿಐಐ ಆಯೋಜಿಸಿರುವ ಇವತ್ತಿನ ‘ಸಂಕಲ್ಪದಿಂದ ಸಿದ್ದಿ’ ಸಮ್ಮೇಳನವು ಈ ನಿಟ್ಟಿನಲ್ಲಿ ಆಲೋಚಿಸುವಂತಹ ಸಮ್ಮೇಳನವಾಗಿ ಮಾರ್ಪಡಲಿ. 75 ವರ್ಷಗಳಲ್ಲಿ ನಮ್ಮ ದೇಶ ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ. ಅಂತರಿಕ್ಷದಿಂದ ಹಿಡಿದು, ಪ್ರಜಾಪ್ರಭುತ್ವದ ಬೇರುಗಳನ್ನು ಆಳವಾಗಿ ತಳವೂರುವಂತೆ ಮಾಡುವಂತೆ ಸಾಧನೆ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದರು.

ಇವತ್ತು ನಾವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿದ್ದೇವೆ ಇದನ್ನು ಯಾರು ಪ್ರಶ್ನೆ ಮಾಡುವಂತಿಲ್ಲ. ಸ್ವತಂತ್ರ ಭಾರತದಲ್ಲಿ 17 ಲೋಕಸಭಾ ಚುನಾವಣೆಗಳು ನಡೆದಿವೆ, 22 ಸರಕಾರಗಳು ಬಂದಿವೆ, ಪ್ರತಿಯೊಬ್ಬ ಪ್ರಧಾನಿಯೂ ದೇಶದ ಬೆಳವಣಿಗೆಗೆ ತಮ್ಮದೆ ಆದ ರೀತಿಯಲ್ಲಿ ಆಯಾ ಕಾಲಕ್ಕೆ, ಆಯಾ ಪರಿಸ್ಥಿತಿಗೆ ತಕ್ಕಂತೆ ಕಾಣಿಕೆ ನೀಡಿದ್ದಾರೆ. ಅದರಿಂದಾಗಿಯೆ, ನಾವು ಇವತ್ತು ಇಲ್ಲಿ ನಿಂತಿದ್ದೇವೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡಲು ನಿರ್ಧರಿಸಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ಬಾಲಕರು, ಯುವಕರು ಸ್ವಾತಂತ್ರ್ಯದ ಹೋರಾಟದ ಸ್ಫೂರ್ತಿ, ತ್ಯಾಗ, ಬಲಿದಾನ, ಇತಿಹಾಸವನ್ನು ತಿಳಿದುಕೊಳ್ಳದಿದ್ದರೆ ಅವರು ದೇಶದ ವಿಕಾಸದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಲಕ್ಷಾಂತರ ಮಹನೀಯರ ಬಗ್ಗೆ ತಿಳಿದುಕೊಂಡು ಯುವ ಪೀಳಿಗೆ ವಿಕಾಸದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಆಶಯ ಎಂದು ಅವರು ಹೇಳಿದರು.

ಕಳೆದ ಎಂಟು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ, ಇಡೀ ವಿಶ್ವ ಇವತ್ತು ನಮ್ಮ ದೇಶದ ಬೆಳವಣಿಗೆಯ ವೇಗವನ್ನು ಗಮನಿಸುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿ, ಸುಧಾರಣೆಯನ್ನು ನಾವು ಕಂಡಿದ್ದೇವೆ. ಈ ರೀತಿ ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಅಭಿವೃದ್ಧಿಯನ್ನು ಬೇರೆ ಯಾವ ಸರಕಾರದಲ್ಲಿಯೂ ಆಗಿಲ್ಲ ಎಂದು ಅಮಿತ್ ಶಾ ಹೇಳಿದರು.

ಜಿಎಸ್ಟಿಯಲ್ಲಿ 1.65 ಲಕ್ಷ ಕೋಟಿ ರೂ.ರಾಜಸ್ವ ಸಂಗ್ರಹ ಮಾಡಿದೆ. ಎಫ್‍ಡಿಐ, ಈಸ್ ಆಫ್ ಡೂಯಿಂಗ್ ಬಿಸಿನೆಸ್‍ನಲ್ಲಿಯೂ ಸಾಧನೆ ಮಾಡಿದ್ದೇವೆ. ಆತ್ಮನಿರ್ಭರ್ ಭಾರತ್ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಪ್ರಯತ್ನಿಸಿದ್ದೇವೆ. ಕೋವಿಡ್ ಸಾಂಕ್ರಮಿಕದ ಸಂದರ್ಭದಲ್ಲಿ ಮೋದಿ ಸರಕಾರ ಕೈಗೊಂಡ ಹಲವಾರು ಸುಧಾರಣಾ ಕ್ರಮಗಳಿಂದಾಗಿ ದೇಶದ ಪ್ರಗತಿ ಸ್ಥಿರವಾಗಿದೆ. ಸ್ವದೇಶಿ ಲಸಿಕೆ ಅಭಿವೃದ್ಧಿ, ಎಂಎಸ್‍ಎಂಇ ಉಳಿಸಲು 6 ಲಕ್ಷ ಕೋಟಿ ರೂ.ವರ್ಕಿಂಗ್ ಕ್ಯಾಪಿಟಲ್, 80 ಕೋಟಿ ಜನರಿಗೆ ಎರಡು ವರ್ಷಗಳ ಕಾಲ ಉಚಿತ ಪಡಿತರ ಒದಗಿಸಲಾಗಿದೆ ಎಂದು ಅವರು ಹೇಳಿದರು.

120 ಕೋಟಿ ಜನರಿಗೆ ಎರಡು ಡೋಸ್ ಕೋವಿಡ್ ಲಸಿಕೆ ಉಚಿತವಾಗಿ ಹಾಕಿದ್ದೇವೆ. 2022ರಲ್ಲಿ ಭಾರತದ ಜಿಡಿಪಿ ಶೇ.7.4ರಷ್ಟು ಬೆಳವಣಿಗೆ ಆಗಿದ್ದರೆ, ಚೀನಾ ಶೇ.3.3, ಬ್ರೆಝಿಲ್ ಶೇ.1.7ನಷ್ಟಿದೆ. ರೂಪಾಯಿ ಮೌಲ್ಯದ ಕುಸಿತದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಜಾಗತಿಕವಾಗಿ ನಾವು ಯುರೋಪ್, ಚೀನಾ, ಜಪಾನ್, ಬ್ರೆಝಿಲ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ನೋಡಬೇಕಿದೆ ಎಂದು ಅಮಿತ್ ಶಾ ಹೇಳಿದರು.

ಭಾರತದ ಕೈಗಾರಿಕೆಗಳು ತಮ್ಮ ವೇಗ ಹೆಚ್ಚಿಸುವ ಬದಲು ಸ್ಕೇಲ್ ಬದಲಾಯಿಸಲು ಪ್ರಯತ್ನಿಸಿದರೆ ಮುಂದುವರೆಯಬಹುದು. ಆರ್ ಅಂಡ್ ಡಿ ಬಗ್ಗೆ ಹೆಚ್ಚು ಒತ್ತು ನೀಡಬೇಕು. ನವೋದ್ಯಮಗಳಿಗೆ ಉತ್ತೇಜನ ನೀಡಬೇಕು. ಕೈಗಾರಿಕೆಗಳು ಹಾಗೂ ನವೋದ್ಯಮಗಳ ನಡುವಿನ ಬಾಂಧವ್ಯ ವೃದ್ಧಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಜಿ.ಕಿಷನ್ ರೆಡ್ಡಿ, ಸಿಐಐ ಪ್ರಧಾನ ನಿರ್ದೇಶಕ ಚಂದ್ರಜೀತ್ ಬ್ಯಾನರ್ಜಿ, ಜೆಟ್‍ಲೈನ್ ಗ್ರೂಪ್ ಕಂಪನಿಯ ಉಪಾಧ್ಯಕ್ಷ ರಾಜನ್ ನವಾನಿ, ಐಟಿಸಿ ಲಿಮಿಟೆಡ್ ಮುಖ್ಯಸ್ಥ ಸಂಜೀವ್ ಪುರಿ, ಟಿವಿಎಸ್ ಸಪ್ಲೈ ಚೇನ್ಸ್ ಸಲ್ಯೂಷನ್ಸ್ ಲಿಮಿಟೆಡ್ ಕಾರ್ಯಕಾರಿ ಉಪಾಧ್ಯಕ್ಷ ಆರ್.ದಿನೇಶ್, ಟೊಯೋಟಾ ಕಿರ್ಲೋಸ್ಕರ್ ಮೋಟರ್ ಪ್ರೈ.ಲಿ.ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್, ಆರ್‍ಪಿ ಸಂಜೀವ್ ಗೋಯಂಕ ಗ್ರೂಪ್‍ನ ಮುಖ್ಯಸ್ಥ ಡಾ.ಸಂಜೀವ್ ಗೋಯಂಕ, ಕೇಂದ್ರ ಸರಕಾರದ ಸಂಸ್ಕøತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News