ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

Update: 2022-08-04 18:04 GMT

ಬೆಂಗಳೂರು, ಆ.4: ಬೆಂಗಳೂರಿನ ಯಲಹಂಕದಲ್ಲಿರುವ ದೇಶದ ಎರಡನೆ ಅತಿದೊಡ್ಡ ಸಹಕಾರ ಹಾಲು ಮಹಾಮಂಡಳ ವಾಗಿರುವ ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್)ಯ ಮದರ್ ಡೈರಿಗೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕಳೆದ ನಾಲ್ಕು ದಶಕಗಳಿಂದ ಕೆಎಂಎಫ್ ಸಲ್ಲಿಸುತ್ತಿರುವ ಸೇವೆ, ಜಿಲ್ಲಾ ಮಟ್ಟದ ಸಹಕಾರ ಹಾಲು ಒಕ್ಕೂಟಗಳ ನಿರ್ವಹಣೆ, ಹಾಲಿನ ಶೇಖರಣೆ ಪ್ರಮಾಣ, ರಾಸುಗಳಿಗೆ ಒದಗಿಸಲಾಗಿರುವ ವಿಮೆ ಭದ್ರತೆ, ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನ ಹಾಗೂ ಮುಂದಿನ ದಿನಗಳಲ್ಲಿ ಕೆಎಂಎಫ್ ವಹಿವಾಟು ವೃದ್ಧಿಸುವ ನಿಟ್ಟಿನಲ್ಲಿ ಹಾಕಿಕೊಂಡಿರುವ ಯೋಜನೆಗಳ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಳಿ ಅವರು ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಕೆಎಂಎಫ್ ವತಿಯಿಂದ ಹಾಲಿನ ಸಂಗ್ರಹ ವಿಧಾನ, ನಂದಿನಿ ಬ್ರಾಂಡ್ ಮೂಲಕ ಸಿದ್ಧಪಡಿಸಲಾಗುವ ಹಾಲಿನ ಉತ್ಪನ್ನಗಳು, ಅವುಗಳ ಮಾರುಕಟ್ಟೆ ವ್ಯಾಪ್ತಿ, ವಾರ್ಷಿಕ ವಹಿವಾಟು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆಯೂ ಅಮಿತ್ ಶಾ ತಿಳಿದುಕೊಂಡರು.

ಮದರ್ ಡೈರಿ ಭೇಟಿ ಬಳಿಕ ಯಲಹಂಕದ ಡೈರಿ ಸರ್ಕಲ್‍ನಲ್ಲಿರುವ ಕೆಎಂಎಫ್ ಪ್ರಧಾನ ಕಚೇರಿಗೂ ಅಮಿತ್ ಶಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ರಾಜೇಂದ್ರ ಕೆ., ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕರ್ನಾಟಕ ಸಹಕಾರ ಮಹಾಮಂಡಳದ ಹಿರಿಯ ಅಧಿಕಾರಿಗಳು ಮದರ್ ಡೈರಿಯಲ್ಲಿರುವ ಹಾಲಿನ ಪುಡಿ ಘಟಕ ಮತ್ತು ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಕೆಎಂಎಫ್ ಚಟುವಟಿಕೆಗಳನ್ನು ಶ್ಲಾಘಿಸಿ, ಕೆಎಂಎಫ್ ಮತ್ತು ನಂದಿನಿ ಬ್ರ್ಯಾಂಡ್ ಅನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ.

-ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News