ಅಮಿತ್ ಶಾ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕನ್ನಡ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

Update: 2022-08-04 16:46 GMT

ಬೆಂಗಳೂರು, ಆ.4: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ನಗರದ ಖಾಸಗಿ ಹೊಟೇಲ್‍ನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ವತಿಯಿಂದ ಆಯೋಜಿಸಲಾಗಿದ್ದ ‘ಸಂಕಲ್ಪ್ ಸೆ ಸಿದ್ದಿ’ ಸಮ್ಮೇಳನದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಹಿಂದೆಯೂ ಅಮಿತ್ ಶಾ ರಾಜ್ಯದಲ್ಲಿ ಭಾಗವಹಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ವೇಳೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲಾಗಿತ್ತು.

ಆದರೆ, ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಕನ್ನಡದ ಕಡೆಗಣನೆ ಮುಂದುವರಿದಿದೆ. ಸಂಕಲ್ಪ್ ಸೆ ಸಿದ್ದಿ ಕಾರ್ಯಕ್ರಮದ ವೇದಿಕೆ ಸಂಪೂರ್ಣವಾಗಿ ಹಿಂದಿಮಯವಾಗಿತ್ತು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಾರ್ಯಕ್ರಮದ ಚಿತ್ರಗಳನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಅದೇ ಚಿತ್ರಗಳನ್ನು ಬಳಸಿಕೊಂಡು ನೆಟ್ಟಿಗರು, ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಕಡೆಗಣನೆ ಕುರಿತು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಒಕ್ಕೂಟ ಸರಕಾರ ಪದೇಪದೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡಕ್ಕೆ ಧಕ್ಕೆಯಾದರೆ ಕರವೇ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಕರ್ನಾಟಕದಲ್ಲಿ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸಬೇಕಿದೆ. 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ನೆಲದ ಭಾಷೆಯನ್ನೇ ಭಾರತ ಸರಕಾರ ಕಡೆಗಣಿಸುತ್ತಿರುವುದು ನಿಜಕ್ಕೂ ಖಂಡನಾರ್ಹ.ಇದನ್ನು ಕರವೇ ಕಟುವಾಗಿ ವಿರೋಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

'ಕನ್ನಡಿಗರ ಸಂಸ್ಕೃತಿ,ಕನ್ನಡಿಗರ ಉದ್ಯೋಗ ಕನ್ನಡಿಗರ ನೆಲ,ಕನ್ನಡಿಗರ ಪಾಲಿನ ಸ್ವಾಭಿಮಾನವನ್ನು ಈ ಏಳೂವರೆ ದಶಕಗಳಲ್ಲಿ ಪರಕೀಯ ಶಕ್ತಿಗಳು ಕಸಿದುಕೊಂಡಿದ್ದೆ ಹೆಚ್ಚು ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ಸ್ವಂತ ಗುರುತು ಯಾವುದು ಎನ್ನುವುದನ್ನು ಅರಿಯಲಿ' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News