ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಣೆ: ಬೆಂಗಳೂರು ವಿವಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆ.4: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷೆ ಬರೆಯಲು ನಿರಾಕರಣೆ ಮಾಡಿರುವ ಸಂಬಂಧ ಹೈಕೋರ್ಟ್, ಬೆಂಗಳೂರು ವಿವಿಗೆ ನೋಟಿಸ್ ಜಾರಿ ಮಾಡಿದೆ.
ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿ ಮನೋಜ್ ಎಸ್. ಅವರು ತಮಗೆ ಉದ್ದೇಶಪೂರ್ವಕವಾಗಿ ಪರೀಕ್ಷಾ ಪ್ರವೇಶ ಪತ್ರವನ್ನು ನೀಡದೆ, ಪರೀಕ್ಷೆ ಬರೆಯದಂತೆ ವಿದ್ಯುನ್ಮಾನ ವಿಭಾಗದ ಉಪನ್ಯಾಸಕರು ತಡೆದಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ‘ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು, ಮೌಲ್ಯಮಾಪನ ಕುಲಸಚಿವರು, ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಿಗೆ' ಆ.3ರಂದು ನೋಟಿಸ್ ಜಾರಿ ಮಾಡಿದೆ.
ಜು.4 ಮತ್ತು ಜು.6ರಂದು ನಡೆದ ಸೆಮಿಸ್ಟರ್ ಪರೀಕ್ಷೆಗಳಿಗೆ ಬೆಂಗಳೂರು ವಿವಿಯುಪ್ರವೇಶ ಪತ್ರವನ್ನು ನೀಡದೆ ಉದ್ದೇಶಪೂರ್ವಕವಾಗಿ ಪರೀಕ್ಷೆಗಳನ್ನು ತಪ್ಪಿಸಿದೆ ಎಂದು ವಿದ್ಯಾರ್ಥಿಯು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.