ನಿಮಗೆ ಈ ಅಧಿಕಾರ ಕೊಟ್ಟವರ್ಯಾರು ? ಜಿ7 ದೇಶಗಳ ಎಚ್ಚರಿಕೆಗೆ ಚೀನಾ ಪ್ರತಿಕ್ರಿಯೆ

Update: 2022-08-04 17:35 GMT

ಬೀಜಿಂಗ್, ಆ.4: ತೈವಾನ್‌ಗೆ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿಯನ್ನು ನೆಪವಾಗಿಸಿ ತೈವಾನ್ ಜಲಸಂಧಿಯಲ್ಲಿ ಆಕ್ರಮಣಕಾರಿ ಮಿಲಿಟರಿ ಚಟುವಟಿಕೆಯನ್ನು ಚೀನಾ ಹೆಚ್ಚಿಸಬಾರದು ಎಂಬ ಜಿ7 ದೇಶಗಳ ಎಚ್ಚರಿಕೆಗೆ ತಿರುಗೇಟು ನೀಡಿರುವ ಚೀನಾ ‘ ನಿಮಗೆ ಈ ಅಧಿಕಾರ ಕೊಟ್ಟವರ್ಯಾರು ? ಎಂದು ಪ್ರಶ್ನಿಸಿದೆ.

 ಪೆಲೋಸಿ ಭೇಟಿಯ ಬಳಿಕ ಚೀನಾ ನಡೆಸುತ್ತಿರುವ ಪ್ರತಿಕ್ರಿಯಾತ್ಮಕ ಕ್ರಮಗಳು ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಮತ್ತು ಪ್ರದೇಶವನ್ನು ಅಸ್ಥಿರಗೊಳಿಸುವ ಅಪಾಯವನ್ನು ಉಂಟು ಮಾಡುತ್ತದೆ. ಯಾವುದೇ ದೇಶದ ರಾಜತಾಂತ್ರಿಕರು ವಿದೇಶಕ್ಕೆ ಭೇಟಿ ನೀಡುವುದು ಸಹಜ ಪ್ರತಿಕ್ರಿಯೆಯಾಗಿದೆ ಎಂದು ಜಿ7 ದೇಶಗಳ ವಿದೇಶಾಂಗ ಸಚಿವರ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. 

ಅಮೆರಿಕದ ಪ್ರಚೋದನಕಾರಿ ನಡೆಯನ್ನು ಈ ಹೇಳಿಕೆ ಗಮನಿಸಿಲ್ಲ. ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂರಕ್ಷಿಸುವ ಸಮಂಜಸ ಮತ್ತು ನ್ಯಾಯಸಮ್ಮತ ಕ್ರಮಗಳನ್ನು ಕೈಗೊಂಡಿರುವ ಚೀನಾದ ಮೇಲೆ ಆಧಾರರಹಿತ ಟೀಕೆ ಮಾಡಲಾಗಿದೆ. ಅಂತಹ ವಿಶೇಷಾಧಿಕಾರವನ್ನು ಅವರಿಗೆ ಕೊಟ್ಟವರ್ಯಾರು? ಹಕ್ಕುಗಳನ್ನು ಉಲ್ಲಂಘಿಸುವವರನ್ನು ರಕ್ಷಿಸಲು ಹಕ್ಕುಗಳ ರಕ್ಷಕರನ್ನು ಟೀಕಿಸಲು ಅವರಿಗೆ ಯಾವ ಅಧಿಕಾರವಿದೆ. ಜಿ7 ಸದಸ್ಯರ ಹೇಳಿಕೆಯು ಚೀನಾದ ಜನತೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವಾಂಗ್ ಹೇಳಿದ್ದಾರೆ. 

ಇಂದಿನ ಚೀನಾವು 19ನೇ ಶತಮಾನದ ಚೀನಾವಲ್ಲ. ಇತಿಹಾಸವು ಪುನರಾವರ್ತನೆ ಆಗಬಾರದು ಮತ್ತು ಅದು ಎಂದಿಗೂ ಸ್ವತಃ ಪುನರಾವರ್ತನೆ ಆಗುವುದಿಲ್ಲ ಎಂದವರು ಹೇಳಿದ್ದಾರೆ. ಜಪಾನ್ ಕೂಡಾ ಸದಸ್ಯನಾಗಿರುವ ಜಿ7 ದೇಶಗಳ ಹೇಳಿಕೆಯ ಹಿನ್ನೆಲೆಯಲ್ಲಿ, ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಆಸಿಯಾನ್ ಸಭೆಯ ನೇಪಥ್ಯದಲ್ಲಿ ನಡೆಯಬೇಕಿದ್ದ ಚೀನಾ ಮತ್ತು ಜಪಾನ್ ವಿದೇಶಾಂಗ ಸಚಿವರ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನ್ಯಿಂಗ್ ಹೇಳಿದ್ದಾರೆ. 

ಇತರ ಜಿ7 ದೇಶಗಳು ತೈವಾನ್ ವಿಷಯದಲ್ಲಿ ಅಮೆರಿಕದ ಹೆಜ್ಜೆಯನ್ನು ತುಳಿದರೆ ಅದರರ್ಥ, ಅವರ ರಾಜತಾಂತ್ರಿಕತೆ ಮತ್ತು ನೀತಿಗಳಲ್ಲಿ ಅವರಿಗೆ ಯಾವುದೇ ಸ್ವಾತಂತ್ರಗಳಿಲ್ಲ ಎಂದಾಗಿದೆ. ಒಂದು ಚೀನಾ ನೀತಿಗೆ ಬದ್ಧವಾಗಿರುವುದು ಚೀನಾದೊಂದಿಗಿನ ಅವರ ಸಂಬಂಧದ ತಳಪಾಯ ಎಂಬುದನ್ನು ಅವರು ಮರೆಯಬಾರದು ಎಂದು ಚುನ್ಯಿಂಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News