ಭಾರತದಲ್ಲಿ ಮಲ ಹೊರುವ ಪದ್ದತಿಯಿಲ್ಲ ಆದರೆ, 5 ವರ್ಷದಲ್ಲಿ ಶೌಚಗುಂಡಿಯಲ್ಲಿ 330 ಮಂದಿ ಸಾವು

Update: 2022-08-05 08:42 GMT

ಹೊಸದಿಲ್ಲಿ, ಆ.4: ಭಾರತದಲ್ಲಿ ಯಾರೂ ಶೌಚಾಲಯ ಗುಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿಲ್ಲ, ಆದರೆ 2017 ಮತ್ತು 2021ರ ನಡುವಿನ ಅವಧಿಯಲ್ಲಿ, ಶೌಚಗುಂಡಿಗಳನ್ನು ಸ್ವಚ್ಛ ಮಾಡುವ ವೇಳೆ ಸಂಭವಿಸಿದ ಅವಘಡಗಳಲ್ಲಿ 330 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರಕಾರವು ಮಂಗಳವಾರ ಲೋಕಸಭೆಗೆ ತಿಳಿಸಿದೆ.

ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಅಂಥ ಕೆಲಸಗಾರರ ಪುನರ್ವಸತಿ ಕಾಯ್ದೆ, 2013ರ ಅಡಿಯಲ್ಲಿ ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಈ ಪದ್ಧತಿ ಭಾರತದ ಹಲವು ಭಾಗಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ.

ಬಹುಜನ ಸಮಾಜ ಪಕ್ಷದ ಸಂಸದ ಗಿರೀಶ್ ಚಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠಾವಳೆ ಈ ಅಂಕಿಸಂಖ್ಯೆಗಳನ್ನು ನೀಡಿದರು.

ದೇಶದಲ್ಲಿ ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸಗಾರರು ಗುತ್ತಿಗೆ ಮತ್ತು ತಾತ್ಕಾಲಿಕ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದಕ್ಕೆ ಸಂಬಂಧಿಸಿದ ವಿವರಗಳನ್ನು ಗಿರೀಶ್ ಚಂದ್ರ ಕೋರಿದರು ಹಾಗೂ ಈ ಪಿಡುಗನ್ನು ನಿವಾರಿಸಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದನ್ನು ಅವರು ತಿಳಿಯಬಯಸಿದರು.

20 ಶೇಕಡಕ್ಕೂ ಅಧಿಕ ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರನ್ನು ‘ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಅಂಥ ಕೆಲಸಗಾರರ ಪುನರ್ವಸತಿ ಕಾಯ್ದೆ, 2013’ರ ಅಡಿಯಲ್ಲಿ ನೋಂದಾಯಿಸಲಾಗಿಲ್ಲವೇ ಎಂಬುದಾಗಿಯೂ ಅವರು ಪ್ರಶ್ನಿಸಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ, ಶೌಚಗುಂಡಿಗಳನ್ನು ಸ್ವಚ್ಛಗೊಳಿಸುತ್ತ ಮೃತಪಟ್ಟ ಕಾರ್ಮಿಕರ ರಾಜ್ಯವಾರು ಸಂಖ್ಯೆಗಳನ್ನು ನೀಡುವಂತೆಯೂ ಅವರು ಕೋರಿದರು.

‘‘ಇಲ್ಲ ಸರ್, ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಅಂಥ ಕೆಲಸಗಾರರ ಪುನರ್ವಸತಿ ಕಾಯ್ದೆ, 2013ರ 2(1)(ಜಿ) ಪರಿಚ್ಛೇದದಡಿಯಲ್ಲಿ ನಿರೂಪಿಸಲಾದಂತೆ, ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಯಾರಾದರೂ ತೊಡಗಿರುವ ವರದಿಯಿಲ್ಲ’’ ಎಂಬುದಾಗಿ ತನ್ನ ಉತ್ತರದಲ್ಲಿ ಅಠಾವಳೆ ಹೇಳಿದರು. ‘‘2013 ಡಿಸೆಂಬರ್ 6ರಿಂದ ಅನ್ವಯಿಸುವಂತೆ, ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಆ ದಿನಾಂಕದ ಬಳಿಕ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಯಾವುದೇ ವ್ಯಕ್ತಿಯನ್ನು ಬಳಸುವಂತಿಲ್ಲ’’ ಎಂದು ಅವರು ಹೇಳಿದರು.

ಆದರೆ, ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 58,098 ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರನ್ನು ಸರಕಾರ ಗುರುತಿಸಿದೆ ಎಂಬುದಾಗಿ ಜುಲೈ 26ರಂದು ಅಠಾವಳೆ ಲೋಕಸಭೆಗೆ ಹೇಳಿದ್ದರು. 2017ರಿಂದೀಚೆಗೆ ಭಾರತದಾದ್ಯಂತ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ 347 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದಾಗಿ ಜುಲೈ 19ರಂದು ಸರಕಾರ ಲೋಕಸಭೆಗೆ ತಿಳಿಸಿತ್ತು.

ಶೌಚಗುಂಡಿಗಳನ್ನು ಸ್ವಚ್ಛಗೊಳಿಸುತ್ತಾ ಸಾಯುವವರು ಹೆಚ್ಚಾಗಿ ದಿನಗೂಲಿ ಕಾರ್ಮಿಕರಾಗಿದ್ದಾರೆ.

‘‘ತಾಂತ್ರಿಕವಾಗಿ ಅವರನ್ನು ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛ ಕೆಲಸ ಮಾಡುವವರೆಂದು ಹೇಳಲು ಸಾಧ್ಯವಿಲ್ಲ’’ ಎಂದು ಕರ್ನಾಟಕ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಎಮ್. ಶಿವಣ್ಣ ಕೋಟೆ ‘ದ ಹಿಂದೂ’ ಪತ್ರಿಕೆಗೆ ಕಳೆದ ವರ್ಷ ಹೇಳಿದ್ದರು. ‘‘ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಮಾಡುವವರು ಅಥವಾ ಸಫಾಯಿ ಕರ್ಮಾಚಾರಿಗಳು ಅಥವಾ ಪೌರಕಾರ್ಮಿಕರು- ಇವರೆಲ್ಲರೂ ಪಂಚಾಯತ್‌ಗಳು ಮತ್ತು ಮುನಿಸಿಪಾಲಿಟಿಗಳು ಮುಂತಾದ ಸ್ಥಳೀಯಾಡಳಿತ ಸಂಸ್ಥೆಗಳಿಂದ ನಿರ್ದಿಷ್ಟ ಉದ್ದೇಶಕ್ಕಾಗಿ ನೇಮಕಗೊಂಡವರಾಗಿದ್ದಾರೆ’’ ಎಂದು ಅವರು ಹೇಳಿದ್ದರು.

2017ರಿಂದ 2021ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಕೈಯಿಂದ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಾ ಯಾರೂ ಮೃತಪಟ್ಟಿಲ್ಲ ಎಂಬುದಾಗಿ ಮಂಗಳವಾರ ಅಠಾವಳೆ ಹೇಳಿಕೊಂಡರು.

‘‘ಆದರೆ, ಈ ಐದು ವರ್ಷಗಳಲ್ಲಿ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಂಭವಿಸಿದ ಅವಘಡಗಳಲ್ಲಿ 330 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ’’ ಎಂದು ಸಚಿವರು ತಿಳಿಸಿದರು.

2017 ಮತ್ತು 2021ರ ನಡುವಿನ ಅವಧಿಯಲ್ಲಿ, ಉತ್ತರಪ್ರದೇಶದಲ್ಲಿ ಇಂಥ 47 ಸಾವುಗಳು ಸಂಭವಿಸಿವೆ ಎಂದು ಸರಕಾರ ಹೇಳಿದೆ. ತಮಿಳುನಾಡಿನಲ್ಲಿ 43 ಮತ್ತು ದಿಲ್ಲಿಯಲ್ಲಿ 42 ಸಾವುಗಳು ಸಂಭವಿಸಿವೆ. ಹರ್ಯಾಣದಲ್ಲಿ 36 ಇಂಥ ಸಾವುಗಳು ಸಂಭವಿಸಿದರೆ, ಮಹಾರಾಷ್ಟ್ರದಲ್ಲಿ 30 ಸಾವುಗಳು ಸಂಭವಿಸಿವೆ.

2014 ಅಕ್ಟೋಬರ್ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ 10.99 ಕೋಟಿ ಮತ್ತು ನಗರ ಪ್ರದೇಶಗಳಲ್ಲಿ 62.65 ಲಕ್ಷ ಶೌಚಾಲಯಗಳನ್ನು ‘ಸ್ವಚ್ಛಭಾರತ’ ಕಾರ್ಯಕ್ರಮದಡಿ ನಿರ್ಮಿಸಲಾಗಿದೆ ಎಂದು ಸಚಿವರು ಮಂಗಳವಾರ ಲೋಕಸಭೆಗೆ ತಿಳಿಸಿದರು.

‘‘ಈ ಕಾರ್ಯಕ್ರಮವು ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ದೊಡ್ಡ ದೇಣಿಗೆಯನ್ನು ನೀಡಿತು’’ ಎಂದರು. ‘‘ಕೈಯಿಂದ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ಮುಂದುವರಿದಿರುವ ಬಗ್ಗೆ, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಸಂಘಟನೆಗಳಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವರದಿಗಳನ್ನು ಪಡೆದುಕೊಂಡಿದೆ. ಅದರ ಆಧಾರದಲ್ಲಿ, ದೇಶದಲ್ಲಿ ಈಗಲೂ ಎಷ್ಟು ಶುಚಿಯಿಲ್ಲದ ಶೌಚಾಲಯಗಳು ಇವೆ ಹಾಗೂ ಅದಕ್ಕೆ ಹೊಂದಿಕೊಂಡು ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಎಷ್ಟು ಕಾರ್ಮಿಕರು ಇದ್ದಾರೆ ಎನ್ನುವುದನ್ನು ಪತ್ತೆಹಚ್ಚುವುದಕ್ಕಾಗಿ ಸಚಿವಾಲಯವು 2020 ಡಿಸೆಂಬರ್ 24ರಂದು ‘ಸ್ವಚ್ಛತಾ ಅಭಿಯಾನ’ ಎಂಬ ಮೊಬೈಲ್ ಆ್ಯಪನ್ನು ಹೊರತಂದಿದೆ’’ ಎಂದು ಸಚಿವರು ನುಡಿದರು.ಆದರೆ, ಈವರೆಗೆ, ಒಂದೇ ಒಂದು ಶುಚಿಯಿಲ್ಲದ ಶೌಚಾಲಯ ವರದಿಯಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News