ಬೆಂಗಳೂರು: ನಕಲಿ ಛಾಪಾ ಕಾಗದ ವಂಚನೆ ಜಾಲ ಪತ್ತೆ; 11 ಮಂದಿ ಆರೋಪಿಗಳ ಬಂಧನ

Update: 2022-08-05 13:42 GMT

ಬೆಂಗಳೂರು, ಆ.5: ಸರಕಾರ ನಿಷೇಧಿಸಿರುವ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 5.11 ಲಕ್ಷ ರೂ. ಮೌಲ್ಯದ ವಿವಿಧ ಮುಖ ಬೆಲೆಯ 2,664 ನಕಲಿ ಸ್ಟಾಂಪ್ ಕಾಗದಗಳು, ನಕಲಿ ಸೀಲ್‍ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾಯ ಭವನದ ಆವರಣದಲ್ಲಿರುವ ಟೈಪಿಂಗ್ ಪೂಲ್‍ನಲ್ಲಿರುವ ಕೆಲವು ಅಂಗಡಿಗಳಲ್ಲಿ ಸರಕಾರದಿಂದ ನಿಷೇಧಿಸಿರುವ ಛಾಪಾ ಕಾಗದಗಳನ್ನು, ವಿವಿಧ ಮುಖಬೆಲೆಯ ಸ್ಟಾಂಪ್ ಕಾಗದಗಳನ್ನು ಹೆಚ್ಚಿನ ಬೆಲೆಗೆ ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿದರು.

ತಕ್ಷಣ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಕಲಿ ಸ್ಟಾಂಪ್ ಪೇಪರ್ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಒಂದು ಹಳೆಯ ಸ್ಟಾಂಪ್ ಕಾಗದವನ್ನು 5 ಸಾವಿರದಿಂದ 8 ಸಾವಿರಕ್ಕೆ ಮಾರಾಟ ಮಾಡುತ್ತಿದ್ದು, ಸದ್ಯದ ಮಾಹಿತಿ ಅನ್ವಯ ಒಂದು ಕಾಗದಕ್ಕೆ 5 ಸಾವಿರ ರೂ.ಗೆ ಮಾರಾಟ ಮಾಡಿದರೂ 2,664 ಕಾಗದಗಳಿಗೆ ಒಟ್ಟು 1,33,20,000 ಬೆಲೆಯಾಗಿರುತ್ತದೆ ಎಂದು ಸಿಸಿಬಿ ಪೊಲೀಸರು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News