BBMP ವಾರ್ಡ್ ಮೀಸಲಾತಿಗೆ ವಿರೋಧ; ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆಗೆ ಕಾಂಗ್ರೆಸ್ ನಾಯಕರ ಯತ್ನ

Update: 2022-08-05 14:19 GMT

ಬೆಂಗಳೂರು, ಆ.5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪ್ರಕಟಿಸಿರುವ ವಾರ್ಡ್ ಮೀಸಲಾತಿಯನ್ನು ವಿರೋಧಿಸಿ, ಶುಕ್ರವಾರ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರು ಯತ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಿಕಾಸಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕರು, ಮುಖಂಡರು ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ‘ಬಿಜೆಪಿ ಕಚೇರಿ’, ‘ಆರೆಸೆಸ್ಸ್ ಕಚೇರಿ’ ಎಂಬ ಭಿತ್ತಿ ಪತ್ರ ಅಂಟಿಸಿ, ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಅಲ್ಲದೆ, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಲು ಯತ್ನಿಸಿದರು. ನಗರಾಭಿವೃದ್ಧಿ ಕಚೇರಿ ಎದುರು ನೂಕುನುಗ್ಗಲು ಉಂಟಾಯಿತು. ಈ ವೇಳೆ ನಗರಾಭಿವೃದ್ಧಿ ಕಚೇರಿ ಎದುರು ಧರಣಿ ಕೂರಿದ ಕಾಂಗ್ರೆಸ್ ನಾಯಕರು, ಸರಕಾರವು ಅಸಮರ್ಪಕವಾದ ಮೀಸಲಾತಿಯನ್ನು ಪ್ರಕಟಿಸಿದೆ. ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ, ಮನಸೋಇಚ್ಛೆ ಮೀಸಲಾತಿಯನ್ನು ಪ್ರಕಟಿಸಿದೆ ಎಂದು ಕಿಡಿಗಾರಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಾರ್ಡುಗಳ ಮರು ವಿಂಗಡನೆಯು ಕಾನೂನಿನ ಪ್ರಕಾರ ಅಧಿಕಾರಿಗಳ ಮಟ್ಟದಲ್ಲಿ ಆಗಿಲ್ಲ. ಬಿಬಿಎಂಪಿಯ ಮುಖ್ಯ ಆಯುಕ್ತರನ್ನು ವಾರ್ಡುಗಳ ಮರುವಿಂಗಡನೆಗೆ ಸಂಬಂಧಿಸಿದ ಸಮಿತಿಗೆ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಅವರು ಒಂದೇ ಒಂದು ಸಭೆಯನ್ನು ಮಾಡಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ವಾರ್ಡುಗಳ ಮರುವಿಂಗಡನೆ ಮಾಡಲಾಗಿದೆ ಎಂದು ಕಿಡಿಗಾರಿದರು.

ವಾರ್ಡುಗಳ ಮರುವಿಂಗಡನೆಗೆ ಸಂಬಂಧಿಸಿದಂತೆ ಸುಮಾರು 3,500 ಆಕ್ಷೇಪಣೆಗಳು ಬಂದಿದ್ದವು. ಅವುಗಳ ಬಗ್ಗೆ ಗಮನ ಹರಿಸಿಲ್ಲ. ಇದೀಗ, ಸುಪ್ರೀಂಕೋರ್ಟ್ 7 ದಿನಗಳಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ಸೂಚಿಸುತ್ತಿದ್ದಂತೆ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ಮಾಜಿ ಪಾಲಿಕೆ ಸದಸ್ಯರು ಚುನಾವಣೆಗೆ ನಿಲ್ಲದಂತೆ ಮಾಡಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೋ ಆ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವನ್ನು ವಾಮ ಮಾರ್ಗದಲ್ಲಿ ಸೋಲಿಸಲು ನಡೆದಿರುವ ವ್ಯವಸ್ಥಿತ ಸಂಚು ಇದು ಎಂದು ರಾಮಲಿಂಗಾರೆಡ್ಡಿ ಕಿಡಿಗಾರಿದರು.

ಬಿಬಿಎಂಪಿಗೆ ಚುನಾವಣೆ ನಡೆಯಬೇಕು ಎಂಬುದು ನಮ್ಮ ಇಚ್ಛೆ. ಸರಕಾರ ಕಾನೂನು ರೀತಿ ಮೀಸಲಾತಿಯನ್ನು ಘೋಷಿಸಿ ಚುನಾವಣೆ ನಡೆಸಲಿ. ಅಸಮರ್ಪಕವಾಗಿ ಮಾಡಿರುವ ಮೀಸಲಾತಿಗೆ ನಮ್ಮ ವಿರೋಧವಿದೆ, ಸರಕಾರ ಈ ಅನ್ಯಾಯವನ್ನು ಸರಿಪಡಿಸದೆ ಇದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಶಾಸಕರಾದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಝಮೀರ್ ಅಹ್ಮದ್ ಖಾನ್, ರಿಝ್ವಾನ್ ಅರ್ಶದ್, ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News