ಮಂಗಳೂರು; ಸಾಲದ ಜಾಮೀನು ಪತ್ರಕ್ಕೆ ಸಹಿ ಹಾಕಿ ವಂಚನೆ ಆರೋಪ: ದೂರು

Update: 2022-08-05 15:20 GMT

ಮಂಗಳೂರು, ಆ.5: ಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ತನ್ನ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮೂರು ಮಂದಿಯ ವಿರುದ್ಧ ಮಧ್ವರಾಯ ಭಟ್ ಎಂಬವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.

ರಕ್ಷಾ ಬಾಳಿಗ, ನಿಧಿ ವಾಸುದೇವ ಕಾಮತ್, ವಾಸುದೇವ ಕಾಮತ್ ಎಂಬವರು ಮಹಾರಾಷ್ಟ್ರದಲ್ಲಿ ಡೈರಿ ಫಾರ್ಮ್ ಮಾಡುವ ಉದ್ದೇಶದಿಂದ ಭಾರತ್ ಕೋ- ಆಪರೇಟಿವ್ ಬ್ಯಾಂಕ್ ಮಂಗಳೂರು ಶಾಖೆಯಿಂದ 1.75 ಕೋ.ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.‌

ವಾಸುದೇವ ಕಾಮತ್ ನಿವೃತ್ತ ಬ್ಯಾಂಕ್ ಪ್ರಬಂಧಕರಾಗಿದ್ದು, ದೂರುದಾರ ಮಧ್ವರಾಯ ಭಟ್‌ರ ಪರಿಚಿತರು ಎಂದು ಹೇಳಲಾಗಿದೆ.  ಸಾಲಕ್ಕೆ ಜಾಮೀನುದಾರರಾಗುವಂತೆ ವಾಸುದೇವ ಕಾಮತ್ ಮನವಿ ಮಾಡಿಕೊಂಡ ಮೇರೆಗೆ ಮಧ್ವರಾಯ ಭಟ್ ಕೆಲವು ಷರತ್ತುಗಳನ್ನು ವಿಧಿಸಿ ಸಾಲಕ್ಕೆ ಜಾಮೀನುದಾರರಾಗಿ ಸಹಿ ಹಾಕಿದ್ದರು ಎನ್ನಲಾಗಿದೆ. ಅಲ್ಲದೆ 2.50 ಕೋ.ರೂ. ಮೌಲ್ಯದ ಸ್ಥಿರಾಸ್ತಿಯನ್ನು ಅಡಮಾನವಿಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂವರು ಆರೋಪಿಗಳು 6 ತಿಂಗಳೊಳಗೆ ಬದಲಿ ವ್ಯವಸ್ಥೆ ಮಾಡಿ ಬೇರೆ ಸ್ಥಿರಾಸ್ತಿ ಅಡಮಾನವಿಟ್ಟು ತನ್ನ ಆಸ್ತಿಯನ್ನು ಬಿಟ್ಟು ಕೊಡುವುದಾಗಿ ತಿಳಿಸಿದ್ದರು. ಆದರೆ ಆರೋಪಿಗಳು ಸಾಲ ಮರುಪಾವತಿಸದೆ, ಹಣವನ್ನು ವಾಪಸ್ ಕೇಳಿಕೊಂಡಾಗ ಜೀವಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದರು. ಬ್ಯಾಂಕ್‌ನವರು ಸಾಲ ಪಾವತಿ ಮಾಡುವಂತೆ ಹಾಗೂ ಸ್ಥಿರಾಸ್ತಿ ಮುಟ್ಟುಗೋಲು ಹಾಕುವುದಾಗಿ ತನಗೆ ನೋಟಿಸ್ ನೀಡಿದ್ದಾರೆ ಎಂದು ಮಧ್ವರಾಯ ಭಟ್ ನೀಡಿದ ದೂರಿನಂತೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News