ದೋಷಪೂರಿತ ರಾಷ್ಟ್ರಧ್ವಜಗಳನ್ನು ವಾರ್ಡ್ ಕಚೇರಿಗಳಿಗೆ ಹಿಂದಿರುಗಿಸಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್

Update: 2022-08-06 13:28 GMT

ಬೆಂಗಳೂರು, ಆ.6: ದೋಷವುಳ್ಳ ಅಥವಾ ಗುಣಮಟ್ಟವಲ್ಲದ ರಾಷ್ಟ್ರಧ್ವಜಗಳನ್ನು ಸಾರ್ವಜನಿಕರು ಈಗಾಗಲೇ ಪಡೆದಿದ್ದರೆ, ಅಂತಹವರು ಬಿಬಿಎಂಪಿಯ ಯಾವುದೇ ವಾರ್ಡ್ ಕಚೇರಿಗಳಲ್ಲಿ ಅವುಗಳನ್ನು ಹಿಂದುರುಗಿಸಿ ಸರಿಯಾದ ರಾಷ್ಟ್ರಧ್ವಜವನ್ನು ಪಡೆಯಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ. 

ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿ, ಎಪ್ಪತೈದನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.13 ರಿಂದ 15ರವರೆಗೆ ನಡೆಯಲಿರುವ “ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ(ಹರ್ ಘರ್ ತಿರಂಗಾ)” ಅಭಿಯಾನಕ್ಕಾಗಿ ಬಿಬಿಎಂಪಿಯ ಎಲ್ಲಾ ವಾರ್ಡ್ ಕಚೇರಿಗಳು, ಪ್ರಮುಖ ಜನನಿಬಿಡ ಪ್ರದೇಶಗಳು, ಮಾಲ್‍ಗಳು, ಕಚೇರಿಗಳು, ಇತರೆ ಸ್ಥಳಗಳಲ್ಲಿ ರಾಷ್ಟ್ರಧ್ವಜಗಳನ್ನು ವಿತರಿಸುತ್ತಿದೆ. ವಿತರಿಸಿದ ಧ್ವಜಗಳು ಭಾರತದ ಧ್ವಜ ಸಂಹಿತೆಯ ಪ್ರಕಾರ, ಧ್ವಜದ ಆಕಾರ, ಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವು ಸಮಾನ ಗಾತ್ರ ಹಾಗೂ ಅಶೋಕ ಚಕ್ರವು ಮಧ್ಯಭಾಗದಲ್ಲಿರಬೇಕು. ಸರಿಯಾಗಿ ಇಲ್ಲದ ರಾಷ್ಟ್ರ ಧ್ವಜಗಳನ್ನು ಅಂದರೆ ಅಳತೆ ವ್ಯತ್ಯಾಸಗಳು, ಅಶೋಕ ಚಕ್ರ ಮಧ್ಯಭಾಗದಲ್ಲಿರದೇ ಇರುವುದು, ಇಂತಹ ರಾಷ್ಟ್ರಧ್ವಜಗಳನ್ನು ಸಾರ್ವಜನಿಕರಿಗೆ, ನಾಗರಿಕರಿಗೆ ನೀಡದಿರಲು ಈಗಾಗಲೇ ಸ್ಪಷ್ಟ ಆದೇಶ ನೀಡಲಾಗಿದೆ ಎಂದರು.
  
ನಗರದ ಕೆಲ ಕಡೆ ಅಸ್ಪಷ್ಟವಾದ ಹಾಗೂ ಧ್ವಜ ನೀತಿಯಂತೆ ಇಲ್ಲದ ರಾಷ್ಟ್ರಧ್ವಜಗಳನ್ನು ನೀಡಲಾಗುತ್ತಿದೆ. ಅದನ್ನು ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು. ಹಾಗೆಯೇ ಅಂತಹ ಧ್ವಜಗಳನ್ನು ಹಿಂಪಡೆದು ಸರಕಾರಕ್ಕೆ ಹಿಂತಿರುಗಿಸಲಾಗುವುದು ಎಂದು ಅವರು ತಿಳಿಸಿದರು.

ಕೆ.ಆರ್. ಮಾರುಕಟ್ಟೆಗೆ ಈಗಾಗಲೇ ಭೇಟಿ ನೀಡಲಾಗಿದೆ. ಅಲ್ಲಿ ಬಯೋಗ್ಯಾಸ್‍ನ ಪ್ಲಾಂಟ್ ಕೆಟ್ಟಿದೆ. ಅದನ್ನು ಸರಿಪಡಿಸಲಾಗುವುದು. ಕೆ.ಆರ್. ಮಾರುಕಟ್ಟೆಯ ಕಟ್ಟಡದಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ಕಾಮಗಾರಿಯನ್ನು ನಡೆಸುತ್ತಿದೆ. ಇನ್ನು ಮಾರುಕಟ್ಟೆ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ, ಕಸ ವಿಲೇವಾರಿ ನಡೆಸಲು ಮುಂದಿನ ದಿಗಳಲಲ್ಲಿ ಕ್ರಮವಹಿಸಲಾಗುವುದು ಎಂದರು.

ಗಣೇಶ ಹಬ್ಬಕ್ಕೆ ಬಿಬಿಎಂಪಿ ಮಾರ್ಗಸೂಚಿಯನ್ನು ಪ್ರಕಟಿಸಿಲ್ಲ. ಸರಕಾರದ ಮಟ್ಟದಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬಳಿಕ ಅದರಂತೆ ಕ್ರಮ ಜರುಗಿಸಲಾಗುವುದು. ಆದರೆ ನಗರದಲ್ಲಿ ಪಿಓಪಿ ಗಣೇಶ ಹಾಗೂ ಆರ್ಟಿಫಿಶಿಯಲ್ ಬಣ್ಣ ಹಚ್ಚಿದ ಗಣೇಶ ಸೇರಿದಂತೆ ಸರಕಾರವು ನಿಷೇಧ ಮಾಡಿದ ಗಣೇಶ ಮೂರ್ತಿಗಳನ್ನು ಕೂರಿಸಲು ಅವಕಾಶ ಇಲ್ಲ. ಅವುಗಳನ್ನು ಉತ್ಪಾದಿಸುವ ಸ್ಥಳಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಹಕಾರದೊಂದಿಗೆ ದಾಳಿ ನಡೆಸಿ ಕ್ರಮ ವಹಿಸಲಾಗುತ್ತದೆ. 

-ತುಷಾರ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News