ಮಳೆ ಹಾನಿ: ವಿವಿಧ ಜಿಲ್ಲೆಗಳಿಗೆ ತಕ್ಷಣ 200 ಕೋಟಿ ರೂ.ಬಿಡುಗಡೆಗೆ ಸಿಎಂ ಬೊಮ್ಮಾಯಿ ಆದೇಶ

Update: 2022-08-06 14:09 GMT

ಬೆಂಗಳೂರು, ಆ.6: ಜುಲೈ ಹಾಗೂ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚಾಗಿ ಬಿದ್ದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ತುರ್ತಾಗಿ ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳು ಕೋರಿರುವ ಹಿನ್ನೆಲೆಯಲ್ಲಿ, ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 200 ಕೋಟಿಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಬಳ್ಳಾರಿ-ಕೋಟಿ ರೂ., ಚಿಕ್ಕಮಗಳೂರು-10 ಕೋಟಿ ರೂ., ಚಿತ್ರದುರ್ಗ-5 ಕೋಟಿ ರೂ., ದಕ್ಷಿಣ ಕನ್ನಡ-20 ಕೋಟಿ ರೂ., ದಾವಣಗೆರೆ-15, ಧಾರವಾಡ-5 ಕೋಟಿ ರೂ., ಗದಗ-5 ಕೋಟಿ ರೂ., ಹಾಸನ-15 ಕೋಟಿ ರೂ., ಹಾವೇರಿ-5 ಕೋಟಿ ರೂ., ಕೊಪ್ಪಳ-10 ಕೋಟಿ ರೂ., ಮಂಡ್ಯ-10 ಕೋಟಿ ರೂ., ರಾಯಚೂರು-10 ಕೋಟಿ ರೂ., ಶಿವಮೊಗ್ಗ-10 ಕೋಟಿ ರೂ., ತುಮಕೂರು-10 ಕೋಟಿ ರೂ., ಉಡುಪಿ-15 ಕೋಟಿ ರೂ., ಉತ್ತರ ಕನ್ನಡ-10 ಕೋಟಿ ರೂ., ವಿಜಯನಗರ-5 ಕೋಟಿ ರೂ., ಮೈಸೂರು-15 ಕೋಟಿ ರೂ., ಚಾಮರಾಜನಗರ-5 ಕೋಟಿ ರೂ., ಕೋಲಾರ-5 ಕೋಟಿ ರೂ. ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ 10 ಕೋಟಿ ರೂ.ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಷರತ್ತುಗಳು: ಈ ಆದೇಶದಲ್ಲಿ ಬಿಡುಗಡೆಮಾಡಿದ ಅನುದಾನವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಕೇಂದ್ರ ಸರಕಾರದ ಎಸ್‍ಡಿಆರ್‍ಎಫ್/ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಸರಕಾರದಿಂದ ಕಾಲ-ಕಾಲಕ್ಕೆ ಹೊರಡಿಸುವ ಆದೇಶಗಳನ್ವಯ ಪರಿಹಾರ ಕಾರ್ಯಗಳಿಗಾಗಿ ವೆಚ್ಚ ಭರಿಸಬೇಕು. ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಹಾಗೂ ಅನುದಾನ ವೆಚ್ಚ ಮಾಡಿದಕ್ಕೆ ಸಂಬಂಧಿಸಿದಂತೆ ಸೂಕ್ತ ಲೆಕ್ಕ ಪತ್ರಗಳನ್ನು ಇಡಬೇಕು ಮತ್ತು ಹಣ ಬಳಕೆ ಪುಮಾಣ ಪತ್ರವನ್ನು ಕಡ್ಡಾಯವಾಗಿ ಸರಕಾರಕ್ಕೆ ಸಲ್ಲಿಸಬೇಕು.

ಈ ಆದೇಶದಲ್ಲಿ ಬಿಡುಗಡೆಯಾದ ಅನುದಾನದ ವೆಚ್ಚದ ವಿವರವನ್ನು ಕೇಂದ್ರೀಯ ಗೃಹ ಮಂತ್ರಾಲಯದ ಎನ್‍ಡಿಎಂಐಎಸ್ ಪೋರ್ಟಲ್‍ರಲ್ಲಿ ನಮೂದಿಸಬೇಕು. ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ಜಿಲ್ಲಾಧಿಕಾರಿಯವರನ್ನೇ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News