BBMP ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ಅಶ್ವತ್ಥನಾರಾಯಣ್ ಟೀಕೆ

Update: 2022-08-06 15:27 GMT

ಬೆಂಗಳೂರು, ಆ. 6: ‘ಬಿಬಿಎಂಪಿ ಚುನಾವಣೆ ಸಂಬಂಧ ವಾರ್ಡ್ ವಿಂಗಡಣೆ, ಮೀಸಲಾತಿ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸದೆ ಕಾಂಗ್ರೆಸ್ ಪಕ್ಷದವರು ಗೂಂಡಾಗಿರಿ ಸಂಸ್ಕೃತಿ, ತೋಳ್ಬಲ ಪ್ರದರ್ಶಿಸುತ್ತಿದ್ದಾರೆ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಟೀಕಿಸಿದ್ದಾರೆ.

ಶನಿವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಬಿಎಂಪಿ ವಿಚಾರದಲ್ಲಿ ನಮ್ಮ ಸರಕಾರ ಕಾನೂನಿನ ಪ್ರಕಾರ ಕ್ರಮ ವಹಿಸಿದೆ. ಕಾನೂನು ಉಲ್ಲಂಘನೆ ಆಗಿದ್ದರೆ, ತಕರಾರಿದ್ದರೆ ತೋರಿಸಲಿ. ಚುನಾವಣೆ ನಡೆಯದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಕೆಲಸ. ಕಾಂಗ್ರೆಸ್ ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದೆ. ನಾವು ಬಿಬಿಎಂಪಿ ಚುನಾವಣೆ ನಡೆಸಿಯೇ ಸಿದ್ಧ. ಇದರಲ್ಲಿ ಯಾವುದೇ ಗೊಂದಲವಿಲ್ಲ' ಎಂದು ನುಡಿದರು.

‘ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಿಗೆ ಕಾನೂನಿನ ಅರಿವಿಲ್ಲ. ವಿಧಾನಸೌಧದಲ್ಲಿ ಅವರ ರೀತಿ ನೀತಿಯನ್ನು ಕಾಂಗ್ರೆಸ್ಸಿಗರು ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಸಂವಿಧಾನ, ಕಾನೂನಿನ ವ್ಯವಸ್ಥೆಯ ಅರಿವಿಲ್ಲ. ಇದು ಅತ್ಯಂತ ಖಂಡನೀಯ. ಸಿದ್ದರಾಮಯ್ಯ ಅವರು ಪದೇ ಪದೇ ನಿವೃತ್ತಿಯ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಎಲ್ಲ ಕಡೆ ನೆಲೆ ಕಳೆದುಕೊಳ್ಳುತ್ತಿದೆ. 75 ವರ್ಷಕ್ಕಾದರೂ ಅವರು ಮಾರ್ಗದರ್ಶಿ ಆಗಬೇಕಿತ್ತು. ಅವರ ಹೇಳಿಕೆಯನ್ನು ಅವರು ಪಾಲಿಸಬೇಕು' ಎಂದು ಕೋರಿದರು.

‘ಬಿಜೆಪಿ ಪಕ್ಷ ಎಂದರೆ ಮನೆಯಂತೆ. ಮನೆ ಎಂದ ಮೇಲೆ ಸಣ್ಣಪುಟ್ಟ ಗೊಂದಲ ಸಹಜ. ಅದನ್ನು ಬಗೆಹರಿಸಿಕೊಳ್ಳುತ್ತೇವೆ' ಎಂದ ಅವರು, ಕಾಂಗ್ರೆಸ್ ಮುಖಂಡರ ಪ್ರಕಾರ ಮುಸಲ್ಮಾನ ಮಹಿಳೆಯರು ಜನಪ್ರತಿನಿಧಿ ಆಗಬಾರದೇ? ಕಾಂಗ್ರೆಸ್ ಮುಖಂಡರು ಬಾಯಿಗೆ ಬಂದಂತೆ ಮಾತನಾಡಿ ವಿಧಾನಸೌಧದ ಘನತೆಯನ್ನು ಹಾಳು ಮಾಡಿದ್ದು ಖಂಡನೀಯ ಎಂದು ಟೀಕಿಸಿದರು.

‘ಮೀಸಲಾತಿ ವಿಚಾರದಲ್ಲೂ ಪುನರ್ ಪರಿಶೀಲನೆ ಅನಿವಾರ್ಯವಾಗಿತ್ತು. 243 ಸದಸ್ಯ ಸಂಖ್ಯೆ ಅನುಗುಣವಾಗಿ ಸಮಿತಿ ರಚಿಸಿ ಮೀಸಲಾತಿ ನಿಗದಿ ಮಾಡಲಾಗಿದೆ. ಶೇ.50 ಒಬಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿದೆ. ಸಾಮಾನ್ಯ ವರ್ಗಕ್ಕೆ ಶೇ.50, ಮಹಿಳೆಯರಿಗೆ ಶೇ.50 ಮೀಸಲಾತಿ ಕೊಟ್ಟಿದೆ. ಇದಕ್ಕೆ ವಿರೋಧ, ಆಕ್ಷೇಪಣೆ ಇದ್ದರೆ ಅದಕ್ಕೆ ಅವಕಾಶವಿದೆ' ಎಂದು ಅವರು ನುಡಿದರು.

ವಿಧಾನಸಭೆಯ ಮುಖ್ಯ ಸಚೇತಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಗಾಂಧಿನಗರದ ಶಾಸಕರು ತಮ್ಮ ಪ್ರತಿಭಟನೆ ಮಾಡಿದ್ದರು. ಆದರೆ, ಅವರು ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ. 2015ರಲ್ಲಿ ಜೆಡಿಎಸ್‍ನಲ್ಲಿದ್ದ ಝಮೀರ್ ಅವರು ಹೆಚ್ಚು ಮಹಿಳಾ ಪ್ರತಿನಿಧಿಗಳ ಬಗ್ಗೆ ಆಗ ಪ್ರಶ್ನೆ ಎತ್ತಿರಲಿಲ್ಲ. ಈಗ ಏಕೆ ಮಾತನಾಡುತ್ತಾರೆ? ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News