2014ರಲ್ಲಿ ಭೂಮಿಗೆ ಅಪ್ಪಳಿಸಿದ ಉಲ್ಕೆಯ ಪತ್ತೆ ಕಾರ್ಯಾಚರಣೆ ಆರಂಭ

Update: 2022-08-06 15:37 GMT

ವಾಷಿಂಗ್ಟನ್, ಆ.6: 2014ರಲ್ಲಿ ಭೂಮಿಗೆ ಅಪ್ಪಳಿಸಿದ್ದ ಅಂತರತಾರಾ ಉಲ್ಕೆಯ ಪತ್ತೆಗಾಗಿ ಸಾಗರದಾಳದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ‘ದಿ ಸೈನ್ಸ್ ಟೈಮ್ಸ್’ ವರದಿ ಮಾಡಿದೆ.

ಸೌರವ್ಯೂಹದ ಆಚೆಯಿಂದ ಬಂದಿದೆ ಎಂದು ನಂಬಲಾದ ಉಲ್ಕಾಶಿಲೆ 2014ರಲ್ಲಿ ಪಪುವಾ ನ್ಯೂಗಿನಿಯಾದ ಕರಾವಳಿಯಲ್ಲಿ ಸಮುದ್ರಕ್ಕೆ ಅಪ್ಪಳಿಸಿತ್ತು. ಇದು ಉಲ್ಕಾಪಾತದ ಬಗ್ಗೆ ಮಾಹಿತಿ ದೊರೆತ ಕೇವಲ 3ನೇ ಪ್ರಕರಣವಾಗಿದ್ದು ವಿಜ್ಞಾನಿಗಳು ಈಗ ಬಾಹ್ಯಾಕಾಶದ ಬಂಡೆಯನ್ನು ಹುಡುಕಲು ಸಾಗರದ ಆಳಕ್ಕೆ ದಂಡಯಾತ್ರೆಯನ್ನು ಆರಂಭಿಸಿದ್ದಾರೆ. 2017 ಮತ್ತು 2018ರಲ್ಲಿ ಊಮುವಾಮುವಾ ಮತ್ತು ಬೊರಿಸೋವ್ ಉಲ್ಕೆಗಳು ಭೂಮಿಗೆ ಅಪ್ಪಳಿಸಿದ ಮಾಹಿತಿಯಿದೆ.

ಊಮುವಾಮುವಾ ಸುಮಾರು 100 ಮೀಟರ್ ಉದ್ದವಿದ್ದರೆ, ಬೊರಿಸೋವ್ 0.4 ರಿಂದ 1 ಕಿ.ಮೀನಷ್ಟು ಉದ್ದವಿದೆ. ಇವೆರಡು ಮಾಹಿತಿಯಿರುವ ಆರಂಭಿಕ ಅಂತರತಾರಾ ವಸ್ತುಗಳು ಎಂದು ಪರಿಗಣಿತವಾಗಿದೆ. ಆದರೆ ನೈಋತ್ಯ ಪೆಸಿಫಿಕ್ ಮಹಾಸಾಗರಕ್ಕೆ ಅಪ್ಪಳಿಸಿದ ಉಲ್ಕಾಶಿಲೆ ಈ ಎರಡಕ್ಕೂ ಹಿಂದಿನದು ಎಂದು ನಂತರ ಕಂಡುಬಂದಿದೆ. ಹಾರ್ವರ್ಡ್ ಪ್ರೊಫೆಸರ್ ಆವಿ ಲೊಯೆಬ್ ಮತ್ತು ಸಂಶೋಧನಾ ವಿದ್ಯಾರ್ಥಿ ಅಮೀರ್ ಸಿರಾಜ್ ಉಲ್ಕೆಯ ಅಂತರತಾರಾ ಮೂಲಗಳನ್ನು ಗುರುತಿಸಿದ ಮೊದಲಿಗರಾಗಿದ್ದು, ಇದಕ್ಕೆ ಅವರು ಸಿಎನ್ಇಒಎಸ್ 2014-01-08 ಎಂದು ಹೆಸರಿಟ್ಟಿದ್ದಾರೆ.

ಅರ್ಧ ಮೀಟರ್ ಅಗಲದ ವಸ್ತುವಿನ ಜಾಡನ್ನು ವಿಶ್ಲೇಷಿಸಿದ ಬಳಿಕ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅದರ ಗಮನಾರ್ಹವಾದ ಅಧಿಕ ಸೂರ್ಯಕೇಂದ್ರೀಯ ವೇಗವು ನಮ್ಮ ಸೂರ್ಯನ ಗುರುತ್ವಾಕರ್ಷಣೆಗೆ ಆಕರ್ಷಿತವಾಗಿಲ್ಲದಿರುವುದನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ. ಆದರೂ ಮಾಹಿತಿಯ ಕೊರತೆಯಿಂದಾಗಿ, ಸಿಎನ್ಇಒಎಸ್ 2014-01-08 ಅನ್ನು ಅಂತರತಾರಾ ವಸ್ತು ಎಂದು ಅಧಿಕೃತವಾಗಿ ನಿಯೋಜಿಸಲು ವೈಜ್ಞಾನಿಕ ಸಮುದಾಯ ನಿರಾಕರಿಸಿದೆ.

ಭೂಮಿಯ ಮೇಲೆ ಉಲ್ಕೆಯ ಪ್ರಭಾವವನ್ನು ಲೆಕ್ಕಾಚಾರ ಮಾಡಲು ಬಳಸಲಾದ ಅಂಕಿಅಂಶವನ್ನು ಅಮೆರಿಕದ ರಕ್ಷಣಾ ಉಪಗ್ರಹ ವಿಭಾಗ ಸಂಗ್ರಹಿಸಿರುವುದು ಇದಕ್ಕೆ ಕಾರಣ. ಅಮೆರಿಕದ ರಕ್ಷಣಾ ಇಲಾಖೆ, ತಮ್ಮ ಉಪಗ್ರಹ ಸಂಗ್ರಹಿಸಿದ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದರಿಂದ ನಿಖರವಾದ ದೋಷ, ಮೌಲ್ಯಗಳು ರಹಸ್ಯವಾಗಿಯೇ ಉಳಿದಿದೆ ಎಂದು ವರದಿ ಉಲ್ಲೇಖಿಸಿದೆ.

ಈ ಮಧ್ಯೆ, ಈ ವರ್ಷದ ಎಪ್ರಿಲ್ 7ರಂದು ಅಮೆರಿಕದ ಬಾಹ್ಯಾಕಾಶ ವಿಭಾಗದ ಮುಖ್ಯ ವಿಜ್ಞಾನಿ ಜೊಯೆಲ್ ಮೋಝರ್ ವರ್ಗೀಕೃತ ದತ್ತಾಂಶವನ್ನು ಪರಿಶೀಲಿಸಿ, ಉಲ್ಕೆಯ ಅಂತರ್ತಾರಾ ಪಥವನ್ನು ದೃಢೀಕರಿಸಿದರು. ವಿಜ್ಞಾನಿಗಳ ಪ್ರಕಾರ, ಉಲ್ಕೆಯು ಮೈಕ್ರೋವೇವ್ಗಿಂತ ತುಸು ದೊಡ್ಡದಿದೆ. ಅದರ ಬಹುತೇಕ ಭಾಗಗಳು ಭೂಮಿಯ ವಾತಾವರಣ ಪ್ರವೇಶಿಸುವಾಗ ಉರಿದು ಹೋಗಿರುವ ಸಾಧ್ಯತೆಯಿದೆ ಮತ್ತು ಉಳಿದ ಭಾಗಗಳು ಪೆಸಿಫಿಕ್ ಸಮುದ್ರದ ಆಳಕ್ಕೆ ಪತನಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News