ಮಂಗಳೂರು; ಫ್ಲ್ಯಾಟ್ ಮಾರಾಟದಲ್ಲಿ ವಂಚನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ಆ.6: ಫ್ಲ್ಯಾಟ್ ಮಾರಾಟ ಮಾಡುವುದಾಗಿ ಹೇಳಿ ಹಣವನ್ನು ಪಡೆದು ಬೇರೆಯವರಿಗೆ ಫ್ಲ್ಯಾಟ್ ಮಾರಾಟ ಮಾಡಿ ವಂಚನೆ ಮಾಡಿರುವ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರುಮಾರ್ಗ ಗ್ರಾಮದ ಕುಲಶೇಖರ ರೆಡ್ ರಾಕ್ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಪ್ಲಾಟ್‌ನ್ನು ಜಿ. ಮುರಳೀಧರ್ ಪೈ ಎಂಬವರಿಗೆ ಆರೋಪಿಗಳಾದ ಪ್ರಶಾಂತ್ ರಸ್ಕಿನಾ ಮತ್ತು ಜಾಯ್ಸ್ ರೀನಾ ರಸ್ಕಿನಾ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳೂರು ತಾಲೂಕು ಉಪ ನೋಂದಾವಣಾಧಿಕಾರಿಯ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ ಕರಾರು ಪತ್ರದಂತೆ ಮಾರಾಟ ಮಾಡಲು ಪ್ರಶಾಂತ್ ರಸ್ಕಿನಾ ಮತ್ತು ಜಾಯ್ಸ್ ರೀನಾ ರಸ್ಕಿನಾ ಒಪ್ಪಿಕೊಂಡಿದ್ದರು. ಅದರಂತೆ 4.50 ಲಕ್ಷ ರೂ.ನ ಚೆಕ್‌ನ್ನು ಮುರಳೀಧರ ಪೈ ನೀಡಿದ್ದರು. ಬಳಿಕ ಫ್ಲ್ಯಾಟನ್ನು ಸೇಲ್ ಡೀಡ್ ನೋಂದಣಿ ಮಾಡಿಕೊಡುವಂತೆ ಕೇಳಿಕೊಂಡರೂ ಆರೋಪಿಗಳು ನಾನಾ ನೆಪವೊಡ್ಡಿ ನಿರಾಕರಿಸಿದ್ದರು ಎನ್ನಲಾಗಿದೆ. ಅಲ್ಲದೆ ಶಶಿಕಲಾ ದೇವಾಡಿಗ ಎಂಬವರ ಹೆಸರಿಗೆ ಫ್ಲ್ಯಾಟನ್ನು ಮಾರಾಟ ಮಾಡುವ ಮೂಲಕ ಈ ಆರೋಪಿಗಳು ನಂಬಿಕೆ ದ್ರೋಹ ಮಾಡಿರುವುದಾಗಿ ಮುರಳೀಧರ್ ಪೈ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.