ಭಾಷೆ ಬೆಳವಣಿಗೆಗೆ ಪದಕೋಶ ಪೂರಕ : ಪ್ರೊ. ಬಿ.ಎ. ವಿವೇಕ ರೈ
ಮಂಗಳೂರು, ಆ.6: ಅರೆಭಾಷೆಯ ಬೆಳವಣಿಗೆ ಹಿನ್ನೆಲೆಯಲ್ಲಿ ಪದಕೋಶ ರಚನೆಯು ಮಹತ್ವದ್ದಾಗಿದೆ. ಅರೆಭಾಷೆ ಉಳಿಯಲು, ಮತ್ತು ಬೆಳೆಯಲು ಪದಕೋಶವು ಪೂರಕವಾಗಿದೆ ಎಂದು ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್ ಮಂಗಳೂರು, ಸಿಐಎಸ್-ಎ೨ಕೆ ಬೆಂಗಳೂರು ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅರೆಭಾಷೆ-ಕನ್ನಡ-ಇಂಗ್ಲಿಷ್ ಪದಕೋಶ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮದ್ರಾಸ್ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಚೆ. ರಾಮಸ್ವಾಮಿ ಮಾತನಾಡಿ ಇತರ ಭಾಷೆಗಳ ಪದ ಸ್ವೀಕಾರಕ್ಕೆ ಮಡಿವಂತಿಕೆ ಬೇಡ. ಹೀಗೆ ಸ್ವೀಕರಿಸುವುದರಿಂದ ಭಾಷೆಯ ಬೆಳವಣಿಗೆಯಾಗಲಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಂಗಳೂರು ಸಂತ ಅಲೋಶಿಯಸ್ ವಿದ್ಯಾಸಂಸ್ಥೆ ರೆಕ್ಟರ್ ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ವಾಣಿಜ್ಯ ವಿಭಾಗದ ನಿರ್ದೇಶಕ ಡೆನ್ನಿಸ್ ಫೆರ್ನಾಂಡಿಸ್, ಡಾ.ವಿಶ್ವನಾಥ ಬದಿಕಾನ, ಭರತೇಶ ಅಲಸಂಡೆಮಜಲು ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ‘ಅಳಿವಿನಂಚಿನಲ್ಲಿರುವ ಸಣ್ಣ ಭಾಷೆಗಳು ಮತ್ತು ಡಿಕ್ಷನರಿ’ ವಿಷಯದ ಕುರಿತು ಪ್ರೊ.ಚೆ. ರಾಮಸ್ವಾಮಿ, ‘ಅಳಿವಿನಂಚಿನ ಭಾಷೆ ಮತ್ತು ಯೋಜನೆಗಳು’ ವಿಷಯದ ಕುರಿತು ವಿಕಿಮೀಡಿಯ ಫೌಂಡೇಶನ್ ಉದ್ಯೋಗಿ ತನ್ವೀರ್ ಹಸನ್, ‘ಡಿಜಿಟಲೀಕರಣ ಮುಕ್ತಜ್ಞಾನ, ಯುನಿಕೋಡ್ ಮತ್ತು ಭಾಷೆ’ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಓಂ ಪ್ರಕಾಶ್ ಮಾತನಾಡಿದರು. ‘ತುಳು ವಿಕಿಪೀಡಿಯ ಸಾಧನೆ ಮತ್ತು ೭ನೇ ವರ್ಷದ ಸಂಭ್ರಮ’ದ ಬಗ್ಗೆ ಡಾ.ವಿಶ್ವನಾಥ ಬದಿಕಾನ ವಿವರಿಸಿದರು.