ಕಸ್ಟಡಿಯಲ್ಲಿರುವ ಫಾಝಿಲ್ ಹತ್ಯೆ ಆರೋಪಿಗಳು ಸ್ಟೇಷನ್ ನಲ್ಲಿ ತಿರುಗಾಡ್ತಿದ್ದಾರೆ ಎಂಬ ಆರೋಪವಿದೆ: ಶಾಫಿ ಸಅದಿ

Update: 2022-08-07 17:07 GMT

ಸುರತ್ಕಲ್, ಆ.7: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಹಾಗೂ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ. ಶಾಫಿ ಸಹದಿ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳಪೇಟೆಯ ಫಾಝಿಲ್ ಮನೆಗೆ ರವಿವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಮಾತನಾಡಿದ ಫಾಝಿಲ್ ಅವರ ಕುಟುಂಬಸ್ಥರು, ಸರಕಾರದ ಇಬ್ಬಗೆ ನೀತಿ, ಜಿಲ್ಲಾಡಳಿತ ನಡೆದುಕೊಂಡ ರೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ, ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆರಾಮವಾಗಿ ದಿನಕಳೆಯುತ್ತಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಶಾಫೀ ಸಅದಿ ಅವರ ಗಮನ ಸೆಳೆದರು.

ಈ ವೇಳೆ ಕುಟುಂಬಸ್ಥರು ಮತ್ತು ಸ್ಥಳೀಯರೊಂದಿಗೆ ಮಾತನಾಡಿದ ಅವರು, ಮನೆಯವರ ಮತ್ತು ಸ್ಥಳೀಯರ ಆರೋಪಗಳನ್ನು ಸಂಬಂಧಪಟ್ಟ ಪೊಲೀಸ್ ಇಲಾಖೆ ಜಿಲ್ಲಾಡಳಿತ ಮತ್ತು ಸರಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜನಪ್ರತಿನಿಧಿಗಳು ಯಾವುದೇ ಜಾತಿ ಧರ್ಮ ಸಂಘ-ಸಂಸ್ಥೆಗಳ ಪ್ರತಿನಿಧಿಗಳೆಲ್ಲ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ನುಡಿದರು.  ಘಟನೆ ನಡೆದ ಅದೇ ದಿನ ಕಾನೂನು ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಕಾನೂನು ಪ್ರಕ್ರಿಯೆಗಳನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಮಾತನಾಡಿದ್ದೇನೆ. ಅಲ್ಲದೆ, ಸರಕಾರ ಸೂಕ್ತ ಪರಿಹಾರ ನೀಡುವಂತೆ ಮುಖ್ಯಮಂತ್ರಿಯ ಜೊತೆ ಚರ್ಚಿಸಲಾಗಿದೆ ಎಂದು ನುಡಿದರು.

ಕರಾವಳಿಯಲ್ಲಿ ಚುನಾವಣೆ ಬರುವಾಗ ಅಮಾಯಕರ ಕಗ್ಗೊಲೆಗಳ ಆಗುತ್ತಿದೆ ಇದರ ಹಿಂದೆ ದೊಡ್ಡ ಪ್ರಮಾಣದ ರಾಜಕೀಯ ಇದೆ ಇದನ್ನು ಮಟ್ಟಹಾಕಲು ಸರಕಾರದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಇದೇ ಸಂದರ್ಭ ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಎರಡು ಲಕ್ಷ ರೂಪಾಯಿಗಳ ಚೆಕ್ಕನ್ನು ಶಾಫಿ ಸಅದಿ ಅವರು ಫಾಝಿಲ್‌ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭ ಮಂಗಳೂರು ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ, ಮುಸ್ಲಿಂ ಜಮಾಅತ್ ತಾಲೂಕು ಸಮಿತಿಯ ಅಬ್ದುಲ್ ರಹಿಮಾನ್ , ಇಕ್ಬಾಲ್ ಕೃಷ್ಣಾಪುರ, ಹಸನ್ ಝುಹ್ರಿ ಮಂಗಳಪೇಟೆ, ಸೈದುದ್ದೀನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸರ್ಫ್ರಾರಾಝ್‌, ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಕಾರ್ಯದರ್ಶಿ ಅಬ್ದುಲ್ ಮಜೀದ್, ಹಮೀದ್ ಕಟ್ಲ, ಮಂಗಳಪೇಟೆ ಮುಹಿಯುದ್ದೀನ್ ಜುಮಾ‌ ಮಸೀದಿ ಅಧ್ಯಕ್ಷ ಹಸನಬ್ಬ, ಅದ್ದು ಹಾಜಿ ಪ್ರಿಂಟೆಕ್, ಎಸ್ ಎಂ ಎ ಸುರತ್ಕಲ್ ರೀಜನ್ ನ ಅಧ್ಯಕ್ಷ ಸಿ. ಅಬ್ದುಲ್ ಹಮೀದ್‌  ಮೊದಲಾದವರು ಉಪಸ್ಥಿತರಿದ್ದರು.

ಮತೀಯ ಗಲಭೆಗಳಲ್ಲಿ ಹತ್ಯೆಗೀಡಾಗುವ ಅಮಾಯಕ ಮೃತರ ಕುಟುಂಬಕ್ಕೆ ಸರಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಶಾಫಿ ಸಅದಿ ಸರಕಾರವನ್ನು ಆಗ್ರಹಿಸಿದ್ದಾರೆ.

ಪರಿಹಾರದ ಮೊತ್ತವನ್ನು ಸರಕಾರ ಭರಿಸಬಾರದು. ಆರೋಪಿಗಳ ಮತ್ತು ಆರೋಪಿಗಳಿಗೆ ಸಹಕರಿಸಿದ ಎಲ್ಲರನ್ನೂ ಕಾನೂನಿನಡಿ ತಂದು ಅವರ ಆರೋಪಗಳು ಸಾಬೀತಾದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಹೀಗಾದರೆ ಮಾತ್ರ ನಡೆಯುತ್ತಿರುವ ಮತೀಯ ಕೊಲೆಗಳಿಗೆ ಅಂತ್ಯ ಹಾಡಲು ಸಾಧ್ಯ ಎಂದ ಅವರು, ಕೊಲೆಗಡುಕರ ಮನೆಗಳ ಮೇಲೆ ಬುಲ್ಡೋಝರ್ ಹರಿಯಲಿ ಎಂದು ನುಡಿದರು.

ಗಾಂಜಾ ಮುಕ್ತ ಮೊಹಲ್ಲಾ ನಿರ್ಮಾಣಕ್ಕೆ ಕರೆ

ಕರಾವಳಿ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ಹಾಗೂ ಇತರ ಗಲಬೆಗಳಿಗೆ ಗಾಂಜಾ ಸೇರಿದಂತೆ ಅಮಲು ಪದಾರ್ಥಗಳು ಕಾರಣ. ಇದರ ಸಂಪೂರ್ಣ ಕಡಿವಾಣಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಜಮಾಅತ್ ಸಮಿತಿ ಪ್ರತಿ ಮೊಹಲ್ಲಾಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಿದ್ದು, ಮೊಹಲ್ಲಾ ನಿರ್ಮಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದೇ ರೀತಿ ಸರ್ವಧರ್ಮೀಯ ಸಂಘ-ಸಂಸ್ಥೆಗಳು ತಮ್ಮ ಸಂಘಟನೆಗಳ ಮೂಲಕ ತಮ್ಮ ಊರಿನಲ್ಲಿರುವ ಗಾಂಜಾ ವ್ಯಸನಿಗಳನ್ನು ಮಟ್ಟಹಾಕುವ ಜೊತೆಗೆ ಅವರನ್ನು ಗಾಂಜಾ ಮುಕ್ತರನ್ನಾಗಿಸಿ ಉತ್ತಮ ಜೀವನ ನಡೆಸಲು ಸಹಕಾರ ನೀಡಬೇಕೆಂದು ಶಾಫಿ ಸಅದಿ ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News