ಫಾಝಿಲ್ ಕೊಲೆಯ ಹಿಂದಿನ ಕೈಗಳು ಯಾರು?: ಫಾಝಿಲ್ ತಂದೆಯ ಸವಾಲು

Update: 2022-08-08 14:46 GMT
ಕೊಲೆಯಾದ ಫಾಝಿಲ್‌ ತಂದೆ ಉಮರ್‌ ಫಾರೂಕ್

ಸುರತ್ಕಲ್,  ಆ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳು ಹಾಗೂ ಸರಕಾರದ ದ್ವಿಮುಖ ನೀತಿಯ ವಿರುದ್ಧ ಮುಸ್ಲಿಂ ಐಕ್ಯತಾ ವೇದಿಕೆ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ.

ಸುರತ್ಕಲ್ ನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆಯ ಮುಖಂಡರು, ಹತ್ಯೆಗೀಡಾದ ಮೂರೂ ಯುವಕರು ಅಮಾಯಕರು, ಆದರೆ ಈ ಪೈಕಿ ಪ್ರವೀಣ್ ಅವರ ಧರ್ಮವನ್ನು ಆಧರಿಸಿ ಸರಕಾರ ಅವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ ಅಲ್ಲದೇ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು, ಶಾಸಕರು, ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆದರೆ ಅಲ್ಲೇ ಪಕ್ಕದಲ್ಲಿರುವ ಅಥವಾ ಸುರತ್ಕಲ್ ಪರಿಸರದಲ್ಲಿ ಕೊಲೆಯಾದ ಯುವಕರ ಕುಟುಂಬಕ್ಕೆ ಸರಕಾರದ ಯಾವುದೇ ಒಬ್ಬ ಪ್ರತಿನಿಧಿ ಭೇಟಿ ನೀಡಿಲ್ಲ, ಯಾವುದೇ ಪರಿಹಾರ ನೀಡಿಲ್ಲ‌. ಇದು ರಾಜ್ಯ ಸರಕಾರದ ದ್ವಿಮುಖ ನೀತಿಯಾಗಿದ್ದು, ಕೊಲೆಗೀಡಾಗಿರುವ ಮೂವರು ಅಮಾಯಕರನ್ನು ಒಂದೇ ರೀತಿ ಪರಿಗಣಿಸಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಳಿಕ ಮಾತನಾಡದ ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್, ಸರಕಾರ ಕೈಗೊಳ್ಳುತ್ತಿರುವ ದ್ವಿಮುಖ ನೀತಿ ಹಾಗೂ ತನಿಖೆಯಲ್ಲಿ ನಡೆಯುತ್ತಿರುವ ಲೋಪಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿ ಕರೆದು ಫಾಝಿಲ್ ಅವರನ್ನೇ  ಕೊಲೆ ಮಾಡಲು ಹಂತಕರು ಬಂದಿದ್ದರು ಎಂದು ಹೇಳಿದ್ದಾರೆ. ಹಾಗಾದರೆ ಫಾಝಿಲ್ ನನ್ನೇ ಕೊಲೆ ಮಾಡಲು ಬಂದಿರುವ ಕಾರಣ ಹಾಗೂ ಕೊಲೆಗೆ ಸಹಕರಿಸಿದವರು ಯಾರು ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಪೊಲೀಸ್ ಕಮಿಷನರ್ ಉತ್ತರಿಸಬೇಕೆಂದರು.

ಫಾಝಿಲ್ ಅವರ ಹತ್ಯೆಯ ಸಂದರ್ಭ ಹಂತಕರು ಎರಡು ಕಾರುಗಳಲ್ಲಿ ಬಂದಿದ್ದರು ಎಂದು ಕಮಿಷನರ್ ಹೇಳಿದ್ದರು.‌ ಹಾಗಾದರೆ ಹಂತಕರ ಇನ್ನೊಂದು ಕಾರು ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.

ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡ ಬಳಿಕ ಫಾಝಿಲ್ ಮನೆಯವರು ಸುರತ್ಕಲ್ ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭ ಕೊಲೆ ಪ್ರಕರಣದ ಆರೋಪಿಗಳು ಹಾಗೂ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳು ಆರಾಮವಾಗಿದ್ದುಕೊಂಡಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಬೊಮ್ಮಾಯಿಯವರು ಕೊಲೆಯಾದ ಪ್ರವೀಣ್ ಮನೆಗೆ ಭೇಟಿ ನೀಡಿ ಇನ್ನುಳಿದ ಫಾಝಿಲ್ ಮತ್ತು ಮಸೂದ್ ಅವರ ಮನೆಗಳಿಗೆ ಭೇಟಿ ನೀಡಿಲ್ಲ, ಜನಪ್ರತಿನಿಧಿಗಳು ಯಾವ ಕಾರಣಕ್ಕಾಗಿ ಈ ರೀತಿಯ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಯವರು ಕನಿಷ್ಠ ಖಂಡನೆಯನ್ನೂ ವ್ಯಕ್ತಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ ಧನ ನೀಡುವ ವಿಚಾರದಲ್ಲಿ ಸರಕಾರ ಇಬ್ಬಗೆ ನೀತಿ ಅನುಸರಿಸಿದೆ ಎಂದು ಆರೋಪಿಸಿ, ಪ್ರವೀಣ್ ಕುಟುಂಬಕ್ಕೆ ನೀಡಿದಂತೆ ಫಾಝಿಲ್ ಮತ್ತು ಮಸೂರು ಕುಟುಂಬಕ್ಕೂ ಪರಿಹಾರ ನೀಡಬೇಕಿತ್ತು ಆದರೆ ನೀಡಿಲ್ಲ ಎಂದು ನುಡಿದ ಅವರು ಸರಕಾರ ನೀಡುತ್ತಿರುವುದು ಸರಕಾರದ ಬೊಕ್ಕಸದಿಂದ ಅದರಲ್ಲಿ ಎಲ್ಲ ಜಾತಿ ಧರ್ಮಗಳ ಜನರ ತೆರಿಗೆ ಹಣ ಸೇರುತ್ತದೆ. ಆದರೂ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕೊಲೆಯಾದ ಫಾಝಿಲ್‌ ತಂದೆ ಉಮರ್ ಫಾರೂಕ್ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ಮಾಧ್ಯಮಗಳು ಮದರಸಾ ಮತ್ತು ಮಸೀದಿಗಳ ಬಗ್ಗೆ ಅಪಪ್ರಚಾರದಲ್ಲಿ ತೊಡಗಿವೆ. ಇವುಗಳು ಎಲ್ಲರಿಗೂ ಎಂದೂ ತೆರೆದಿರುತ್ತವೆ. ಯಾರು ಬೇಕಾದರೂ ಬಂದು ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. ಅಲ್ಲದೆ ಸಮುದಾಯದ ಯಾರಾದರೂ ಒಬ್ಬ ತಪ್ಪು ಮಾಡಿದರೆ ಅದನ್ನು ಇಡೀ ಧರ್ಮದ ತಲೆಗೆ ಹೊರಿಸಿ ಧರ್ಮವನ್ನೇ ದೂಷಿಸುವ ಹುನ್ನಾರಗಳು ನಡೆಯುತ್ತಿವೆ ಎಂದರು.

ಮದರಸಗಳಲ್ಲಿ ಸತ್ಕಾರ್ಯಗಳನ್ನು ಕಲಿಸಲಾಗುತ್ತದೆ. ಅನ್ಯಾಯ, ಹತ್ಯೆ ಮೊದಲಾದವುಗಳನ್ನು ನಮ್ಮವನೇ ಮಾಡಿದರೂ ಇಸ್ಲಾಂ ಪ್ರಚೋದಿಸುವುದಿಲ್ಲ. ಅಮಾಯಕರಿಗೆ ಅನ್ಯಾಯವಾಗಬಾರದು ಅನ್ಯಾಯವಾದವರಿಗೆ ನ್ಯಾಯ ಸಿಗಬೇಕು ಎಂಬುದು ಇಸ್ಲಾಂ ಧರ್ಮದ ನಿಲುವು ಎಂದು ನುಡಿದರು.

ಧರ್ಮಕ್ಕಾಗಿ ಹೋರಾಟ ಮಾಡುವ ಧರ್ಮಕ್ಕಾಗಿ ಕಗ್ಗೊಲೆಗೈಯ್ಯಲು ಯಾವ ಧರ್ಮ ಹೇಳಿದೆ. ಧರ್ಮದ ಹೆಸರಿನಲ್ಲಿ ಕೊಲೆಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ. ಅಮಾಯಕರ ಕೊಲೆ ಹಾಗೂ ಕೊಲೆಗಾರರನ್ನು ಇಸ್ಲಾಂ ಕಟುವಾಗಿ ಖಂಡಿಸಿದ ಎಂದು ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಮರ್ ಫಾರೂಕ್ ಸಖಾಫಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಬಿಎಂ ಮುಮ್ತಾಝ್ ಅಲಿ, ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ, ಪ್ರಧಾನ ಕಾರ್ಯದರ್ಶಿ ಕೆ. ಶರೀಫ್ ಸೇರಿದಂತೆ ಸುರತ್ಕಲ್ ವಲಯ ಐಕ್ಯತಾ ವೇದಿಕೆಯಲ್ಲಿರುವ 27 ಜಮಾಅತ್  ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಫಾಝಿಲ್ ಕೊಲೆಯ ಹಿಂದಿನ ಕೈಗಳು ಯಾರು?: ಫಾಝಿಲ್ ತಂದೆಯ ಸವಾಲು

ಪೊಲೀಸ್ ಕಮಿಷನರ್ ಭರವಸೆ ನೀಡಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಇದರ ಹಿಂದಿರುವ ಕೈಗಳನ್ನು ಬಂಧಿಸಿಲ್ಲ. ಕನಿಷ್ಠ ಇದರ ಹಿಂದೆ ಇರುವವರು ಯಾರು ಎನ್ನುವ ವಿಷಯ ಹೊರಗೆ ಬರುತ್ತಿಲ್ಲ ಎಂದು ಜು.28ರಂದು ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳಪೇಟೆ ನಿವಾಸಿ ಫಾಝಿಲ್ ಅವರ ತಂದೆ ಉಮರ್ ಫಾರೂಕ್ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಟ್ಟಾರೆ ನಿವಾಸಿ ಪ್ರವೀಣ್ ಅವರ ಹತ್ಯೆಯನ್ನು ರಾಜ್ಯ ಸರಕಾರ ಎನ್ಐಎ ತನಿಖೆಗೆ ನೀಡಲು ಮುಂದಾಗಿದೆ. ತನಿಖೆ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ರಾಜ್ಯದ ಪೊಲೀಸರ ವಿಶ್ವಾಸ ಇಲ್ಲವೇ ಎಂದು ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್ ಸರಕಾರವನ್ನು ಪ್ರಶ್ನಿಸಿದ್ದಾರೆ.

ರಾಜ್ಯ ಪೊಲೀಸರ ಮೇಲೆ ಸರಕಾರಕ್ಕೆ ವಿಶ್ವಾಸ ಇಲ್ಲ ಎಂದಾದಲ್ಲಿ 3 ಪ್ರಕರಣಗಳ ತನಿಖೆಯನ್ನು ಎನ್ಐಎ ವಹಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿರುವ ಪೊಲೀಸ್ ಇಲಾಖೆ ಸಹಿತ ಸರಕಾರದ ಅಧೀನದಲ್ಲಿರುವ ಯಾವುದೇ ತನಿಖಾ ತಂಡಗಳ ಮೇಲೆ ಸರಕಾರಕ್ಕೇ ವಿಶ್ವಾಸವಿಲ್ಲ. ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿಗೆ ವಿಶ್ವಾಸ ಇಲ್ಲದ ಮೇಲೆ ನಾವು ಹೇಗೆ ವಿಶ್ವಾಸ ಇಡಲು ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದ ಫಾರೂಕ್ ಅವರು, ಪ್ರವೀಣ್, ಮಸೂದ್ ಹಾಗೂ ಫಾಝಿಲ್  ಮೂವರು ಅಮಾಯಕರ ಹತ್ಯೆಯ ತನಿಖೆಯನ್ನು ಎನ್ ಐಎಗೆ ವಹಿಸಲಿ ಎಂದು ಅವರು ಸರಕಾರಕ್ಕೆ ಸವಾಲು ಹಾಕಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News