ತೈವಾನ್ ಸುತ್ತಲೂ ಹೊಸ ಸಮರಾಭ್ಯಾಸ: ಚೀನಾ ಘೋಷಣೆ

Update: 2022-08-08 16:31 GMT

ಬೀಜಿಂಗ್, ಆ.8: ಸಮರಾಭ್ಯಾಸದ ಮೂಲಕ ತೈವಾನ್ಗೆ ದಿಗ್ಬಂಧನ ವಿಧಿಸಬಾರದು ಎಂಬ ಅಮೆರಿಕ, ಜಪಾನ್ ಮುಂತಾದ ದೇಶಗಳ ಆಗ್ರಹವನ್ನು ಕಡೆಗಣಿಸಿರುವ ಚೀನಾ, ತೈವಾನ್ ಬಳಿ ತೈವಾನ್ ದ್ವೀಪದ ಸುತ್ತಮುತ್ತ ಸೋಮವಾರದಿಂದ ಹೊಸ ಸಮರಾಭ್ಯಾಸ ಆರಂಭಿಸಿರುವುದಾಗಿ ಘೋಷಿಸಿದೆ.

 ಜಲಸಂಧಿಯಲ್ಲಿ ಆಗಸ್ಟ್ 4ರಿಂದ ಆರಂಭವಾಗಿರುವ ಸಮರಾಭ್ಯಾಸ ರವಿವಾರ ಅಂತ್ಯಗೊಳ್ಳಲಿದೆ ಎಂದು ಈ ಹಿಂದೆ ಚೀನಾ ಸರಕಾರ ಘೋಷಿಸಿತ್ತು. ಆದರೆ ಸೋಮವಾರ ತೈವಾನ್ ಸುತ್ತಮುತ್ತ ಜಲಾಂತರ್ಗಾಮಿ ವಿರೋಧಿ ದಾಳಿಗಳು ಮತ್ತು ಸಮುದ್ರ ದಾಳಿಯ ಹೊಸ ಸಮರಾಭ್ಯಾಸಕ್ಕೆ ಚಾಲನೆ ನೀಡಲಾಗಿದೆ ಎಂದು ಪೀಪಲ್ಸ್ ಲಿಬರೇಷನ್ ಆರ್ಮಿ(ಚೀನಾ ಸೇನೆ)ಯ ಈಸ್ಟರ್ನ್ ಥಿಯೇಟರ್ ಕಮಾಂಡ್ ಹೇಳಿಕೆ ನೀಡಿದೆ.

 ಆದರೆ ಎಷ್ಟು ದಿನ ಇದು ಮುಂದುವರಿಯಲಿದೆ ಎಂಬ ವಿವರ ನೀಡಿಲ್ಲ. ಈ ಮಧ್ಯೆ, ಚೀನಾ ಮತ್ತು ಕೊರಿಯ ಪರ್ಯಾಯ ದ್ವೀಪಗಳ ನಡುವಿನ ಹಳದಿ ಸಮುದ್ರ ಮತ್ತು ಉತ್ತರ ಚೀನಾದ ಬೊಹಯ್ ಸಮುದ್ರದ ಕರಾವಳಿಯಲ್ಲಿ ಸಮರಾಭ್ಯಾಸ ಮುಂದುವರಿದಿದ್ದು ಆಗಸ್ಟ್ 15ರವರೆಗೆ ನಡೆಯಲಿದೆ ಎಂದು ಚೀನಾ ರವಿವಾರ ಹೇಳಿಕೆ ನೀಡಿತ್ತು. ಈ ಮೂಲಕ ಸಮರಾಭ್ಯಾಸವನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಇರಾದೆ ಪ್ರಕಟಿಸಿದೆ.

ಹಳದಿ ಸಮುದ್ರದಲ್ಲಿ ಆಗಸ್ಟ್ 7ರಿಂದ ಆಗಸ್ಟ್ 15ರವರೆಗೆ, ಬೊಹಾಯ್ ಸಮುದ್ರದಲ್ಲಿ ಆಗಸ್ಟ್ 8ರಿಂದ ಸೆಪ್ಟಂಬರ್ 8ರವರೆಗೆ ಸಮರಾಭ್ಯಾಸ ನಡೆಯಲಿದೆ ಎಂದು ಚೀನಾದ ಸಮುದ್ರ ಸುರಕ್ಷತಾ ಆಡಳಿತ ಸಂಸ್ಥೆ (ಎಂಎಸ್ಎ) ರವಿವಾರ ಹೇಳಿಕೆ ನೀಡಿದೆ. ರವಿವಾರ ಪಿಎಲ್ಎ ತೈವಾನ್ ಜಲಸಂಧಿಯ ಸುತ್ತಮುತ್ತ ದ್ವೀಪ ಶುದ್ಧತ್ವ ದಾಳಿ ಸಮರಾಭ್ಯಾಸ ನಡೆಸಿದೆ. ಜತೆಗೆ, ಬಾಂಬರ್ ವಿಮಾನ ನಿರೋಧ ಪಡೆ ನಿಯೋಜನೆ, ತೈವಾನ್ ಜಲಸಂಧಿಯನ್ನು ಏಕಕಾಲದಲ್ಲಿ ಎರಡೂ ದಿಕ್ಕುಗಳಲ್ಲಿ ಬಾಂಬರ್ ವಿಮಾನಗಳು ದಾಟುವ ಪ್ರಾತ್ಯಕ್ಷಿತೆ ಮತ್ತು ಅಭ್ಯಾಸ ನಡೆಸಲಾಗಿದೆ ಎಂದು ಚೀನಾ ಘೋಷಿಸಿದೆ.

ಅಮೆರಿಕ ಸಂಸತ್ ಸ್ಪೀಕರ್ ಪೆಲೋಸಿ ತೈವಾನ್ ಭೇಟಿಗೆ ಪ್ರತಿಯಾಗಿ ಚೀನಾ ಕೈಗೊಂಡಿರುವ ಪ್ರತಿಕ್ರಮಗಳು ಸೂಕ್ತ ಮತ್ತು ಸಮರ್ಥನೀಯ ಕ್ರಮಗಳಾಗಿವೆ. ಇವು ತೈವಾನ್ ಅನ್ನು ಪ್ರಚೋದಿಸದಂತೆ ಅಮೆರಿಕಕ್ಕೆ ನೀಡಿದ ಎಚ್ಚರಿಕೆಯಾಗಿದ್ದು ರಾಷ್ಟ್ರೀಯ ಸಾರ್ವಭೌಮತೆ ಮತ್ತು ಭದ್ರತೆಯನ್ನು ರಕ್ಷಿಸುವ ಅಗತ್ಯದ ಕ್ರಮಗಳಾಗಿವೆ. ತೈವಾನ್ ಜಲಸಂಧಿಯಾದ್ಯಂತ ಪ್ರಸ್ತುತ ನೆಲೆಸಿರುವ ಉದ್ವಿಗ್ನತೆ ಅಮೆರಿಕದ ಪ್ರಚೋದನೆಯ ಫಲವಾಗಿದ್ದು ಇದಕ್ಕೆ ಅಮೆರಿಕವೇ ಹೊಣೆಯಾಗಿದೆ ಮತ್ತು ಆ ದೇಶ ಗಂಭೀರ ಪರಿಣಾಮ ಎದುರಿಸಬೇಕು ಎಂದು ಚೀನಾ ರಕ್ಷಣಾ ಇಲಾಖೆಯ ವಕ್ತಾರ ವು ಕ್ವಿಯಾನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವಾಯುಸಂಚಾರ ಸಹಜ ಸ್ಥಿತಿಗೆ : ತೈವಾನ್

 ತೈವಾನ್ ಸುತ್ತಲಿನ ವಾಯುಪ್ರದೇಶವನ್ನು ಮುಕ್ತಗೊಳಿಸಿದ ಬಳಿಕ ವಾಯುಸಂಚಾರ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ತೈವಾನ್‌ ನ ಸಾರಿಗೆ ಮತ್ತು ಸಂವಹನ ಸಚಿವಾಲಯ ಸೋಮವಾರ ಹೇಳಿದೆ. ಈ ಮಧ್ಯೆ, ಈ ಪ್ರದೇಶದಲ್ಲಿ ಹೊಸ ಸಮರಾಭ್ಯಾಸವನ್ನು ಆರಂಭಿಸುವುದಾಗಿ ಚೀನಾ ಘೋಷಿಸಿದೆ.

ಆಗಸ್ಟ್ 4ರಿಂದ ಆರಂಭವಾದ ಚೀನಾದ ಸಮರಾಭ್ಯಾಸದ ಸಂದರ್ಭದಲ್ಲೂ ತೈವಾನ್ ಗೆ ಬರುವ ಮತ್ತು ತೆರಳುವ ಬಹುತೇಕ ನಿಗದಿತ ವಿಮಾನಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದವು (ದಿನಕ್ಕೆ ಸರಾಸರಿ 150 ನಿರ್ಗಮನ ಮತ್ತು ಆಗಮನ) ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. ಸಾಮಾನ್ಯವಾಗಿ ಈ ವಾಯುಪ್ರದೇಶವನ್ನು ಬಳಸುವ ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳು ಸಮರಾಭ್ಯಾಸದ ಸಂದರ್ಭ ಜಪಾನ್ ಮತ್ತು ಫಿಲಿಪ್ಪೀನ್ಸ್ ನಿರ್ವಹಿಸುವ ಪರ್ಯಾಯ ವಾಯುಪ್ರದೇಶದ ಮೂಲಕ ಹಾರಾಟ ನಡೆಸಿವೆ.

 ಶುಕ್ರವಾರ ಮತ್ತು ಶನಿವಾರ ತೈವಾನ್ಗೆ ವಿಮಾನಯಾನ ರದ್ದುಗೊಳಿಸಿದ್ದ ಕೊರಿಯನ್ ಏರ್ ಲೈನ್ಸ್ ಸಂಸ್ಥೆ ರವಿವಾರ ಪರ್ಯಾಯ ಮಾರ್ಗ ಬಳಸಿತ್ತು. ಸೋಮವಾರ ಸಾಮಾನ್ಯ ವಿಮಾನಯಾನ ಕಾರ್ಯಾಚರಣೆ ಆರಂಭಿಸಿರುವುದಾಗಿ ಸಂಸ್ಥೆ ಪ್ರಕಟಿಸಿದೆ. ಕಳೆದ 4 ದಿನಗಳಿಂದ ಪರ್ಯಾಯ ಮಾರ್ಗ ಬಳಸಿದ ಬಳಿಕ ಸೋಮವಾರದಿಂದ ಸಾಮಾನ್ಯ ವಿಮಾನಯಾನ ಆರಂಭಿಸುವುದಾಗಿ ಫಿಲಿಪ್ಪೀನ್ಸ್ ವಿಮಾನ ಯಾನ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News