ಕೇಸರಿ ಧ್ವಜ ಹಿಡಿದ ಮಹಿಳೆಯ ಚಿತ್ರದ ಕಾರ್ಯಕ್ರಮ ಏಕೆ?

Update: 2022-08-09 17:12 GMT

ಮಂಗಳೂರು, ಆ.9: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನಲ್ಲಿ ಆ.11ರಂದು ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಸಹಿತ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಮಧ್ಯೆ ಬಿರುಕು ಮೂಡಿಸುವ ಈ ಕಾರ್ಯಕ್ರಮವನ್ನು ಮಂಗಳೂರು ಕುಲಪತಿ ರದ್ದುಪಡಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ.

ಹಿಜಾಬ್ ಧಾರ್ಮಿಕ ಸಂಕೇತ. ಹಾಗಾಗಿ ಅದರ ಬಳಕೆಗೆ ಅವಕಾಶವಿಲ್ಲ ಎಂದು ವಿದ್ಯಾರ್ಥಿನಿಯರ ಭವಿಷ್ಯ ಹಾಳುಗೆಡಹಿರುವಾಗ ವಿವಿ ಘಟಕ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮ ಆಯೋಜಿಸುವುದು ಎಷ್ಟು ಸರಿ? ಇದು ಸಮಾನತೆಯೇ? ದೇಶದ ಸಂವಿಧಾನಕ್ಕೆ ಅಪಚಾರ ಎಸಗುವ ಇದರ ವಿರುದ್ಧ ಪೊಲೀಸರು ಕ್ರಮ ಜರಗಿಸುವರೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಶಾಂತವಾಗುತ್ತಿರುವ ದ.ಕ. ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಅಶಾಂತಿ ಸೃಷ್ಠಿಸಲು ಯತ್ನಿಸುತ್ತಿರುವವರನ್ನು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ತಡೆಯುವರೇ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು| ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ ಪ್ರಕರಣಕ್ಕೆ ತಿರುವು

ಇದು ಎಬಿವಿಪಿ ಸಂಘಟನೆಯ ನಿರ್ದೇಶನದಂತೆ ನಡೆಯುತ್ತಿರುವ ಕಾರ್ಯಕ್ರಮವಾಗಿದೆ. ಭಾರತವು ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಆಚರಣೆಯಲ್ಲಿ ತೊಡಗಿರುವ ಈ ಸಂದರ್ಭ ಕೈಯಲ್ಲಿ ಕೇಸರಿ ಧ್ವಜ ಹಿಡಿದ ಮಹಿಳೆಯ ಚಿತ್ರವನ್ನು ಭಾರತ ಮಾತೆ ಎಂದು ಬಿಂಬಿಸಿ ಸರಕಾರಿ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮ ನಡೆಸುವುದು, ಅದಕ್ಕೆ ಕಾಲೇಜಿನ ಆಡಳಿತ ಅವಕಾಶ ಕೊಡುವುದು ಎಷ್ಟು ಸರಿ? ಭಾರತ ಮಾತೆ ಅಂತ ಕಲ್ಪಿಸುವುದಾದರೆ ಕೈಯಲ್ಲಿ ಇರಬೇಕಾದದ್ದು ಭಾರತದ ರಾಷ್ಟ್ರ ಧ್ವಜ. ಕೇಸರಿ ಧ್ವಜ ಅಲ್ಲ. ಸಂಘಪರಿವಾರಕ್ಕೆ ಆರಂಭದಿಂದಲೂ ತ್ರಿವರ್ಣ ಧ್ವಜದ ಕುರಿತು ಅಸಹನೆ ಇರುವುದು ಎಲ್ಲರಿಗೂ ತಿಳಿದಿರುವ ಸತ್ಯ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಹುನ್ನಾರವನ್ನು ಅರಿತು ವಿರೋಧಿಸಬೇಕು. ಯಾವುದೇ ಧರ್ಮದ ಸಂಕೇತಗಳು ದೇಶದ ಧ್ವಜ ಆಗಲು ಸಾಧ್ಯವಿಲ್ಲ. ಮಂಗಳೂರು ವಿವಿ ಆಡಳಿತ ಮತ್ತು ದ.ಕ.ಜಿಲ್ಲಾಡಳಿತ ಈ ಕುರಿತು ಮಧ್ಯ ಪ್ರವೇಶಿಸಬೇಕು. ಸ್ವಾತಂತ್ರೋತ್ಸವದ ಸಂಭ್ರಮದ ಸಂದರ್ಭ ಯಾವ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅವಮಾನ ಆಗಲು ಬಿಡಬಾರದು.

ಮುನೀರ್ ಕಾಟಿಪಳ್ಳ, ಅಧ್ಯಕ್ಷರು, ಡಿವೈಎಫ್‌ಐ ಕರ್ನಾಟಕ

ಇದು ಆರೆಸ್ಸೆಸ್ ಕಲ್ಪನೆಯ ಅಖಂಡ ಭಾರತ ನಿರ್ಮಾಣವನ್ನು ವಿದ್ಯಾರ್ಥಿಗಳ ತಲೆಯೊಳಗೆ ತುರುಕುವ ಹುನ್ನಾರವಾಗಿದೆ. ಇದು ದೇಶದ ಸಂವಿಧಾನಕ್ಕೆ ವಿರೋಧವಾಗಿದೆ. ವಿದ್ಯಾರ್ಥಿಗಳ ಮಧ್ಯೆ ವೈಷಮ್ಯ ಸೃಷ್ಟಿಸುವ ಈ ನಡೆ ಖಂಡನೀಯ. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ದೇಶಕ್ಕೆ ನೂರಾರು ಮಹನೀಯರನ್ನು ಅರ್ಪಿಸಿದ ಈ ಕಾಲೇಜನ್ನು ಕೇಸರೀಕರಣ ಮಾಡುವ ಷಡ್ಯಂತ್ರವಾಗಿದೆ. ಯುವ ಸಮೂಹ ಇದರ ವಿರುದ್ಧ ಧ್ವನಿ ಎತ್ತಬೇಕು. ಅದಕ್ಕೂ ಮುನ್ನ ಮಂಗಳೂರು ವಿವಿ ಕುಲಪತಿ ಎಚ್ಚೆತ್ತುಕೊಂಡು ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು.
ಲುಕ್ಮಾನ್ ಬಂಟ್ವಾಳ, ಅಧ್ಯಕ್ಷರು, ದ.ಕ.ಜಿಲ್ಲಾ ಯುವ ಕಾಂಗ್ರೆಸ್

ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಶಿಷ್ಟಾಚಾರಗಳಿಗೆ ಅವಕಾಶವಿಲ್ಲವೆಂಬ ಹೈಕೋರ್ಟ್ ತೀರ್ಪಿಗೆ ವಿರುಧ್ದವಾಗಿ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನಲ್ಲಿ ಹಿಂದೂ ಸಂಸ್ಕೃತಿಯಂತೆ ‘ಭಾರತ ಮಾತಾ ಪೂಜನಾ’ ದ ಹೆಸರಿನಲ್ಲಿ ಪೂಜೆ ನೆರವೇರಿಸಲು ಮುಂದಾಗಿರುವುದು ಖಂಡನೀಯ. ಭಾರತದ ಭೂಪಟವನ್ನು ಬದಲಾಯಿಸಿ, ತ್ರಿವರ್ಣ ಧ್ವಜದ ಬದಲಿಗೆ ಭಗವಾಧ್ವಜವ ಹಿಡಿದ ಭಾರತ ಮಾತೆಗೆ ಸರಕಾರಿ ಕಾಲೇಜಿನಲ್ಲಿ ಒಂದು ಧರ್ಮದ ಪ್ರಕಾರ ಕಾರ್ಯಕ್ರಮ ಆಯೋಜಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

ತಾಜುದ್ದೀನ್ ಅಧ್ಯಕ್ಷರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲೆ

ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಗುರುತೇ ತ್ರಿವರ್ಣ ಧ್ವಜವಾಗಿದೆ. ಭಾರತ ಮಾತೆಯ ಕೈಯಲ್ಲಿ ತ್ರಿವರ್ಣ ಧ್ವಜ ಇರಬೇಕೇ ಹೊರತು ಯಾವುದೇ ಒಂದು ಸಂಘಟನೆಯ ಧ್ವಜವಲ್ಲ. ಸಾಂವಿಧಾನಿಕ ಮೌಲ್ಯಗಳನ್ನು ಕಲಿಸಿ ಉಳಿಸಬೇಕಾದ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಭಾರತ ಮಾತೆಯ ಕೈಯಲ್ಲಿ ಭಗವಾ ಧ್ವಜವನ್ನು ಇರಿಸಿ ತ್ರಿವರ್ಣ ಧ್ವಜಕ್ಕೆ, ದೇಶಕ್ಕೆ, ಸಂವಿಧಾನಕ್ಕೆ ಅವಮಾನ ಮಾಡಲಾಗಿದೆ. ವಿವಿ ಘಟಕ ಕಾಲೇಜು ಒಂದು ಸರಕಾರಿ ಸಂಸ್ಥೆಯಾಗಿದೆ. ಯಾವುದೇ ಒಂದು ಸಂಘಟನೆಯು ನಡೆಸುವ ಸಂಸ್ಥೆಯಲ್ಲ ಎಂಬುದು ಕಾಲೇಜಿನ ಆಡಳಿತ ಮಂಡಳಿಗೆ ತಿಳಿದಿರಬೇಕು. ಅಲ್ಲದೆ ಈ ಕಾಲೇಜಿನ ವಿದ್ಯಾರ್ಥಿ ಸಂಘವು ಒಂದು ಸಂಘಟನೆಯ ಕೈ ಗೊಂಬೆಯಂತೆ ವರ್ತಿಸುವುದು ಈ ಸಂಸ್ಥೆಯ ಘನತೆಗೆ ಧಕ್ಕೆ ತರುವಂತದ್ದಾಗಿದೆ.
ವಿನೀತ್ ದೇವಾಡಿಗ, ಅಧ್ಯಕ್ಷರು ಎಸ್‌ಎಫ್‌ಐ ದ.ಕ.ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News