ನಿತೀಶ್ ಹೊಂದಿದ್ದ ಗೃಹಖಾತೆಗೆ ತೇಜಸ್ವಿ ಯಾದವ್ ಬೇಡಿಕೆ

Update: 2022-08-10 04:57 GMT

ಪಾಟ್ನಾ: ಬಿಹಾರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಮಹಾಮೈತ್ರಿ ಕೂಟದ ಘಟಕ ಪಕ್ಷವಾದ ಕಾಂಗ್ರೆಸ್ ಕೂಡಾ ಸರ್ಕಾರ ಸೇರುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮೂರು ಸಚಿವ ಹುದ್ದೆಗಳನ್ನು ನೀಡಲು ಮೈತ್ರಿಕೂಟ ಮುಂದಾಗಿದ್ದು, ಕಾಂಗ್ರೆಸ್ ಮಾತ್ರ ನಾಲ್ಕು ಹುದ್ದೆಗಳಿಗೆ ಬೇಡಿಕೆ ಮುಂದಿಟ್ಟಿದೆ.

ರಾಷ್ಟ್ರೀಯ ಜನತಾದಳದ ತೇಜಸ್ವಿ ಪ್ರಸಾದ್ ಯಾದವ್ ಅವರು, ಇದುವರೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೈಯಲ್ಲಿದ್ದ ಗೃಹಖಾತೆಗೆ ಬೇಡಿಕೆ ಮುಂದಿಟ್ಟಿದ್ದಾರೆ. ವಿಧಾನಸಭೆ ಸ್ಪೀಕರ್ ಹುದ್ದೆಯ ಮೇಲೂ ಪಕ್ಷ ಕಣ್ಣಿಟ್ಟಿದೆ ಎಂದು ಪಕ್ಷದ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

2015ರಲ್ಲಿ ಕಾಂಗ್ರೆಸ್ ಪಕ್ಷ 27 ಶಾಸಕರನ್ನು ಹೊಂದಿದ್ದ ಸಂದರ್ಭದಲ್ಲಿ ಪಕ್ಷದ ನಾಲ್ವರು ಸಚಿವರಿದ್ದರು. ಪ್ರಸ್ತುತ ಕಾಂಗ್ರೆಸ್ ಸದಸ್ಯಬಲ 19 ಇರುವ ಹಿನ್ನೆಲೆಯಲ್ಲಿ ಆರು ಸದಸ್ಯರಿಗೆ ಒಂದು ಸಚಿವ ಸ್ಥಾನ ಎಂಬ ಸೂತ್ರದ ಆಧಾರದಲ್ಲಿ ಮೂರು ಸಚಿವ ಪದವಿಯನ್ನು ಪಕ್ಷಕ್ಕೆ ನೀಡಲು ನಿರ್ಧರಿಸಲಾಗಿದೆ. ಈ ಪೈಕಿ ದಲಿತ, ಮುಸ್ಲಿಂ ಹಾಗೂ ಮೇಲ್ವರ್ಗದ ತಲಾ ಒಬ್ಬರಿಗೆ ಸಚಿವ ಹುದ್ದೆ ನೀಡಲು ಪಕ್ಷ ಮುಂದಾಗಿದೆ ಎಂದು ತಿಳಿದು ಬಂದಿದೆ.

ಮೇಲ್ವರ್ಗದ ಕೋಟಾದಲ್ಲಿ ಸ್ಥಾನ ಪಡೆಯಲು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ, ಸಿಎಲ್‍ಪಿ ಮುಖಂಡ ಅಜಿತ್ ಶರ್ಮಾ ಮತ್ತು ಹಿರಿಯ ಪದಾಧಿಕಾರಿ ವಿಜಯ್‍ ಶಂಕರ್ ದುಬೆ ರೇಸ್‍ನಲ್ಲಿದ್ದಾರೆ. ಆದ್ದರಿಂದ ಪಕ್ಷದ ಕೋಟಾವನ್ನು ನಾಲ್ಕಕ್ಕೆ ಏರಿಸುವಂತೆ ಕಾಂಗ್ರೆಸ್ ಒತ್ತಡ ಹಾಕುತ್ತಿದೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ಹಿಂದುಳಿದ ವರ್ಗದ ಒಬ್ಬರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಇದೆ. ದಲಿತ ಕೋಟಾದಲ್ಲಿ ರಾಜೇಶ್ ರಾಮ್ ಸಚಿವರಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕಡ್ವಾ ಶಾಸಕ ಶಕೀಲ್ ಅಹ್ಮದ್ ಖಾನ್ ಕೂಡಾ ಸಚಿವರಾಗುವ ಬಗ್ಗೆ ಮಾತುಕತೆ ನಡೆದಿದ್ದು, ಇವರು ಪ್ರಬಲ ಅಲ್ಪಸಂಖ್ಯಾತ ನಾಯಕ ಹಾಗೂ ದೆಹಲಿಯಲ್ಲೂ ಸಂಪರ್ಕ ಹೊಂದಿದ್ದಾರೆ ಎಂದು ಆರ್‍ಜೆಡಿ ಸದಸ್ಯರೊಬ್ಬರು ಹೇಳಿದ್ದಾರೆ. ಈ ಮಧ್ಯೆ ಆರ್‍ಜೆಡಿ ಹಾಗೂ ಕಾಂಗ್ರೆಸ್‍ನ ತಲಾ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಕಾಂಗ್ರೆಸ್ ಪ್ರಸ್ತಾವವನ್ನು ಮೈತ್ರಿಕೂಟ ತಿರಸ್ಕರಿಸಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News