ಬೈಂದೂರು: ಕಾಲುಸಂಕದಿಂದ ಬಿದ್ದು ನೀರುಪಾಲಾದ ವಿದ್ಯಾರ್ಥಿನಿಯ ಮೃತದೇಹ ಪತ್ತೆ

Update: 2022-08-10 15:12 GMT
ಸನ್ನಿಧಿ

ಬೈಂದೂರು, ಆ.10: ಸೋಮವಾರ (ಆ.8) ಅಪರಾಹ್ನ 3 ಗಂಟೆಯ ಸುಮಾರಿಗೆ ಶಾಲೆಯಿಂದ ಮನೆಗೆ ಮರಳುತ್ತಿರುವ ವೇಳೆ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕದಿಂದ ಆಯತಪ್ಪಿ ಬಿದ್ದು ನೀರುಪಾಲಾಗಿದ್ದ ಮಕ್ಕಿಮನೆಯ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ(7) ಮೃತದೇಹ ಸುಮಾರು 48 ಗಂಟೆಗಳ ಬಳಿಕ ಬುಧವಾರ ಸಂಜೆ ವೇಳೆಗೆ ಪತ್ತೆಯಾಗಿದೆ.

ಬೊಳಂಬಳ್ಳಿಯ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೆಯವಳಾದ ಸನ್ನಿಧಿ, ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿಯಾಗಿದ್ದಳು.  ಸೋಮವಾರ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಸನ್ನಿಧಿ, ಆಯತಪ್ಪಿ ತುಂಬಿ ಹರಿಯುವ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಳು.    

ನಾಪತ್ತೆಯಾದ ಸನ್ನಿಧಿಗಾಗಿ ನಿರಂತರವಾಗಿ ಶೋಧ ಕಾರ್ಯ ನಡೆಸಿದರೂ  ಬುಧವಾರ ಸಂಜೆವರೆಗೂ ಯಾವುದೇ ಸುಳಿವು ಇರಲಿಲ್ಲ. ಕೊನೆಗೂ ಸಂಜೆಯ ವೇಳೆಗೆ ಸನ್ನಿಧಿಯ ಮೃತದೇಹವು ನೀರಿಗೆ ಬಿದ್ದ ಕಾಲುಸಂಕದಿಂದ 500 ಮೀಟರ್ ದೂರದ ನೀರಿನಲ್ಲಿ ಪತ್ತೆಯಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

100ಕ್ಕೂ ಅಧಿಕ ಮಂದಿಯಿಂದ ಶೋಧ: ಮಾಹಿತಿ ಸಿಕ್ಕಿದಾಕ್ಷಣ ಸೋಮವಾರ ಸಂಜೆಯಿಂದಲೇ ಪೊಲೀಸ್, ಕಂದಾಯ, ಅಗ್ನಿಶಾಮಕ ದಳ ಸಿಬ್ಬಂದಿಗಳು, ಕೊಡೇರಿಯಿಂದ ಬಂದ ಮೀನುಗಾರರಾದ ನರೇಶ್ ಕೊಡೇರಿ ಮುಂದಾಳತ್ವದ 22 ಜನರ ತಂಡ, ನುರಿತ ಈಜು ಪಟುಗಳು ಹಾಗೂ ಸ್ಥಳೀಯರು ಸೇರಿದಂತೆ ಸುಮಾರಿ 100ರಿಂದ 150 ಮಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರು ಸನ್ನಿಧಿ ನೀರಿಗೆ ಬಿದ್ದ ಬೀಜಮಕ್ಕಿ ಕಾಲುಸಂಕದಿಂದ ಪ್ರಾರಂಭಿಸಿ 6-7 ಕಿ.ಮೀ. ದೂರದ ಕಪ್ಪೆಕೆರೆಯವರಿಗೆ ತೊರೆಯ ನೀರಿನಲ್ಲಿ ಶೋಧಿಸಿದ್ದರು. ತೊರೆ ಕಂಬದಕೋಣೆ ಬಳಿ ಎಡಮಾವಿನ ಹೊಳೆಗೆ ಸೇರುತಿದ್ದು, ಅಲ್ಲೂ ಕೆಲವರು  ಶೋಧ ಕಾರ್ಯದಲ್ಲಿ ತೊಡಗಿದ್ದರು ಎಂದವರು ಹೇಳಿದ್ದರು. ಕಾರ್ಯಾಚರಣೆಗೆ ಎರಡು ದೋಣಿಗಳನ್ನು ಸಹ ಬಳಸಿಕೊಳ್ಳಲಾಗಿತ್ತು.

ಶೋಧ ಕಾರ್ಯದಲ್ಲೂ ವಿವಾದ: ಆದರೆ ಪ್ರಾಕೃತಿಕ ವಿಕೋಪದಲ್ಲಿ ತರಬೇತಿ ಪಡೆದು ಬಂದ ವಿವಿಧ ಇಲಾಖೆಯ ಸಿಬ್ಬಂದಿಗಳು ನೀರಿಗೆ ಇಳಿಯಲಿಲ್ಲ. ಕೇವಲ ಸ್ಥಳೀಯರು, ಮೀನುಗಾರರು ಹಾಗೂ ಕೆಲವು ತಜ್ಞ ಈಜುಪಟುಗಳು ಮಾತ್ರ  ವೇಗವಾಗಿ ಹರಿಯುತಿದ್ದ ನೀರಿಗಿಳಿದು ಶೋಧಕಾರ್ಯದಲ್ಲಿ ತೊಡಗಿಕೊಂಡಿ ದ್ದರೆಂದು ಮನೆಯವರು, ಸ್ಥಳೀಯರು ಹಾಗೂ ಮೀನುಗಾರರು ದೂರಿದರು.

ನಾವು ದೂರದ ಕೊಡೇರಿಯಿಂದ ಬಂದು ಸೋಮವಾರದಿಂದ ಶೋಧ ಕಾರ್ಯದಲ್ಲಿ ನಿರತವಾಗಿದ್ದೇವೆ. ಇಂದು ಬೆಳಗ್ಗೆ 7.30ರಿಂದ ನನ್ನ ತಂಡ ಕಾರ್ಯ ನಿರತವಾಗಿದೆ. ಆದರೆ ಯಾವುದೇ ಸರಕಾರಿ ಸಿಬ್ಬಂದಿ ನಮಗೆ ಇಲ್ಲಿ ಕಂಡುಬಂದಿಲ್ಲ. ಅವರೆಲ್ಲರೂ ಮಾಧ್ಯಮದೆದುರು ಪೋಸ್ ಕೊಡುವುದರಲ್ಲಿ ನಿರತರಾಗಿದ್ದಾರೆ ಎಂದು 22 ಮಂದಿಯ ತಂಡದೊಂದಿಗೆ ಬಂದಿದ್ದ ನರೇಶ್ ಕೊಡೇರಿ ದೂರಿದರು.

ನಮಗೆ ಲೈಫ್ ಜಾಕೆಟ್ ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡಿಲ್ಲ. ಸಚಿವರು ಬರುವ ಮೊದಲು ೫-೬ ಜಾಕೆಟ್‌ಗಳನ್ನು ತಂದು ಕೊಟ್ಟಿದ್ದಾರೆ. ಯಾವುದೇ ಸಲಕರಣೆ ನಮಗೆ ಸಿಕ್ಕಿಲ್ಲ. ಆದರೂ ನಾವು ಕರ್ತವ್ಯ ಮಾಡುತಿದ್ದೇವೆ. ವೇಗವಾಗಿ ಹರಿಯುವ ಈ ತೊರೆಗೆ ಇಳಿದು ಇಲಾಖಾ ಸಿಬ್ಬಂದಿಗಳು ಹುಡುಕಲಿ ನೋಡೋಣ ಎಂದವರು ಸವಾಲು ಹಾಕಿದರು.

ಇಲಾಖಾ ಸಿಬ್ಬಂದಿಗಳಿಗೆ ಸರಕಾರ ಹಣ ನೀಡುತ್ತೆ. ಆದರೆ ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ನಿರ್ವಹಿಸುತ್ತೇವೆ. ಬೆಳಗ್ಗೆ 7.30ರಿಂದ ಕೆಲಸ ಮಾಡುತಿದ್ದೇವೆ. ನಾವು ಎಲ್ಲಿದ್ದೇವೆ. ಎಷ್ಟು ದೂರ ಬಂದಿದ್ದೇವೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ನಮ್ಮ ಬಳಿ ಯಾವುದೇ ಉಪಕರಣಗಳಿಲ್ಲ. ಊಟ-ತಿಂಡಿ ಮಾಡಿದ್ದೀರಾ ಎಂದು ಕೇಳುವವರಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು. 

ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ನಿಜವಾದ ಅಪಾಯ ಎದುರಾದಾಗ ನಮ್ಮಂಥವರು ಜೀವದ ಹಂಗಬಿಟ್ಟು ಹೋರಾಟ ನಡೆಸಬೇಕಾಗುತ್ತದೆ ಎಂದು ತಂಡದ ಸದಸ್ಯರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News