ಮತ್ತೊಮ್ಮೆ ಏಕಾಂಗಿಯಾಗಿ ಜಗತ್ತು ಸುತ್ತುವ ಹಂಬಲ: ಅಮೃತಾ ಜೋಷಿ

Update: 2022-08-10 12:43 GMT

ಮಂಗಳೂರು, ಆ.10: ಸುಮಾರು 6 ತಿಂಗಳ ಕಾಲ ಭಾರತದ ಎಲ್ಲ ರಾಜ್ಯಗಳನ್ನು ಸುತ್ತಾಡಿ, ಸುಮಾರು 23 ಸಾವಿರ ಕಿ.ಮೀ ಕ್ರಮಿಸಿದ ಏಕಾಂಗಿ ಸಾಹಸಿ ಬೈಕ್ ರೈಡರ್, ಕಾಸರಗೋಡು ಮೂಲದ 21ರ ಯುವತಿ ಅಮೃತಾ ಜೋಷಿ ಇಂದು ಮಂಗಳೂರಿಗೆ ಆಗಮಿಸಿದರು.

ಈ ಸಂದರ್ಭ ಅಮೃತ ಜೋಷಿ,  ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ನಗರದ ಕೆನರಾ ಶಾಲೆಗೆ ಆಗಮಿಸಿ ಶಿಕ್ಷಣ ಸಂಸ್ಥೆಯ ಸ್ಥಾಪಕ ದಿ.ಅಮ್ಮೆಂಬಳ ಸುಬ್ಬ ರಾವ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಳಿಕ ಹೈಸ್ಕೂಲ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮೃತಾ ಜೋಷಿ, ಭಾರತೀಯ ಸೇನಾ ಗೌರವಾರ್ಥ ಮತ್ತು ಜನಾಂಗೀಯ ಸಮಾನತೆಗಾಗಿ ಬೈಕ್‌ನಲ್ಲಿ ದೇಶ ಸುತ್ತಿದ್ದೇನೆ. ಕಾಸರಗೋಡು ಪ್ರವೇಶಿಸುವ ಮೂಲಕ ನನ್ನ ಈ ಯಾತ್ರೆ ಮುಕ್ತಾಯಗೊಳ್ಳುತ್ತಿದ್ದು, ಮತ್ತೊಮ್ಮೆ ಏಕಾಂಗಿಯಾಗಿ ಜಗತ್ತು ಸುತ್ತುವ ಹಂಬಲ ಹೊಂದಿದ್ದೇನೆ ಎಂದು ಹೇಳಿದರು.

ತನ್ನ ಯಾತ್ರೆಯ ಬಗ್ಗೆ ವಿವರ ನೀಡಿದ ಅಮೃತಾ ಜೋಷಿ, ಫೆ.4ರಂದು ಕೇರಳದ ಕ್ಯಾಲಿಕಟ್‌ನಿಂದ ಬೈಕ್‌ನಲ್ಲಿ ಸಂಚಾರ ಆರಂಭಿಸಿದ್ದೆ. ತಮಿಳ್ನಾಡು, ಆಂಧ್ರಪ್ರದೇಶ ಬಳಿಕ ಈಶಾನ್ಯ ರಾಜ್ಯಗಳಿಗೆ ತೆರಳಿದೆ. ಚೀನಾ ಗಡಿ ಪ್ರದೇಶ ತವಾಂಗ್‌ನಲ್ಲಿ ಸಂಚಾರ ಕೊನೆಗೊಳಿಸುವ ಉದ್ದೇಶ ಹೊಂದಿದ್ದೆ. ಎ.8ರಂದು ಅಲ್ಲಿಂದ ಮತ್ತೆ ಸಂಚಾರ ಮುಂದುವರಿಸಲು ತೀರ್ಮಾನಿಸಿ ನೇಪಾಳ, ಮ್ಯಾನ್‌ಮಾರ್ ದೇಶಗಳಿಗೂ ಭೇಟಿ ನೀಡಿದ್ದೇನೆ ಎಂದರು.

ಕಾಸರಗೋಡಿನ ಕುಂಬಳೆ ನಿವಾಸಿ ಅಶೋಕ್ ಜೋಷಿ ಮತ್ತು ಅನ್ನಪೂರ್ಣ ದಂಪತಿಯ ಪುತ್ರಿ ಅಮೃತಾ ಜೋಷಿ. ಈಕೆಗೆ ಸಹೋದರಿ ಹಾಗೂ ಸಹೋದರ ಇದ್ದಾರೆ. ಮಂಗಳೂರಿನ ಕೆನರಾದಲ್ಲಿ ಹೈಸ್ಕೂಲ್ ಬಳಿಕ ಕೆಪಿಟಿಯಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. 12 ವರ್ಷ ಇರುವಾಗಲೇ ರೈಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಅಮೃತಾ, 18 ವರ್ಷ ಬಳಿಕ ಬೈಕ್ ಸವಾರಿ ಶುರು ಮಾಡಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಏಕಾಂಗಿ ದೇಶ ಸುತ್ತುವ ಸಾಹಸಕ್ಕೆ ಈಕೆ ಕೈಹಾಕಿದ್ದರು. ಅದಕ್ಕೂ ಮೊದಲು ಎರಡೂವರೆ ವರ್ಷ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರು ಅಮೃತಾ. ತನ್ನ ಪುತ್ರಿ ಬೈಕ್ ಸಂಚಾರ ಮಾಡಿ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಇದೀಗ ತನ್ನ ತಂದೆಯ ಆಸೆಯನ್ನು ಈಡೇರಿಸಿರುವುದಾಗಿ ಅಮೃತಾ ಜೋಷಿ ಹೇಳಿದರು.

ಈ ಸಂದರ್ಭ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ, ಕಾರ್ಯದರ್ಶಿ ರಂಗನಾಥ ಭಟ್, ಜತೆ ಕಾರ್ಯದರ್ಶಿ ಸುರೇಶ್ ಕಾಮತ್, ಆಡಳಿತ ಮಂಡಳಿ ಸದಸ್ಯ ನರೇಶ್ ಶೆಣೈ, ಮುಖ್ಯಗುರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

"ದಿನಂಪ್ರತಿ ಸರಾಸರಿ 500 ಕಿ.ಮೀ. ಪ್ರಯಾಣಿಸುತ್ತಿದ್ದೆ. ಎಲ್ಲಿ ಪ್ರಯಾಣ ಮುಗಿಯುತ್ತದೋ ಅಲ್ಲಿ ವಾಸ್ತವ್ಯ ಮಾಡುತ್ತಿದ್ದೆ. ನನಗೆ ಎಲ್ಲಿಯೂ ಕಿರುಕುಳ, ತೊಂದರೆ ಯಾರಿಂದಲೂ ಆಗಿಲ್ಲ. ಈಶಾನ್ಯ ರಾಜ್ಯಗಳಲ್ಲಂತೂ ಸ್ವಂತ ಸಹೋದರಿಯಂತೆ ನನ್ನನ್ನು ಸ್ವಾಗತಿಸಿದ್ದಾರೆ".
ಅಮೃತಾ ಜೋಷಿ, ಬೈಕ್ ಸವಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News