ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಮೂವರು ಪ್ರಮುಖ ಆರೋಪಿಗಳ‌ ಬಂಧನ: ಎಡಿಜಿಪಿ ಅಲೋಕ್ ಕುಮಾರ್

Update: 2022-08-11 08:52 GMT

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ10ಕ್ಕೆ ಏರಿಕೆಯಾಗಿದೆ.

ಸುಳ್ಯ ನಿವಾಸಿ ಶಿಯಾಬುದ್ದೀನ್ ಆಲಿ (33),  ರಿಯಾಝ್ ಅಂಕತಡ್ಕ‌ (29), ಸುಬ್ರಹ್ಮಣ್ಯ ಎಳಿಮಲೆ ನಿವಾಸಿ ಬಶೀರ್(29) ಬಂಧಿತರು.

ಅವರನ್ನು ತಲಪಾಡಿಯಲ್ಲಿ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಿಯಾಝ್ ಅಂಕತಡ್ಕ ಚಿಕನ್ ಸ್ಟಾಲ್ ಗಳಿಗೆ ಕೋಳಿ ಸಪ್ಲೈ ಮಾಡುತ್ತಿದ್ದು, ಬಶೀರ್ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದವನಾಗಿದ್ದಾನೆ. ಅದೇ ರೀತಿ ಶಿಯಾಬುದ್ದೀನ್ ಕೊಕೊ ಸಪ್ಲೈ ಮಾಡುವ ಕೆಲಸ ನಿರ್ವಹಿಸಿತ್ತಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆದುಕೊಳ್ಳಲಾಗುವುದು. ಬಂಧಿತರಿಗೆ ಆಶ್ರಯ ನೀಡಿದವರು, ಸಹಕರಿಸಿದವರ ಕುರಿತಂತೆ ಸಮಗ್ರ ವಿಚಾರಣೆ ನಡೆಸಿ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗುವುದು ಎಂದು ಎಡಿಜಿಪಿ ವಿವರಿಸಿದರು.

ಪ್ರವೀಣ್ ನನ್ನೇ ಯಾಕೆ ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಕೂಡ ಪಡೆಯಲಾಗುವುದು ಎಂದವರು ತಿಳಿಸಿದರು.

ಬಂಧಿತರ ಹಿನ್ನೆಲೆಯ ಬಗ್ಗೆ ಕಸ್ಟಡಿಗೆ ಪಡೆದು ಮಾಹಿತಿ ಪಡೆಯಲಾಗುವುದು. ಬಂಧಿತ ಪ್ರಮುಖ ಆರೋಪಿಗಳು ಈ ಹಿಂದೆ ಯಾವುದೇ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆಯೂ ವಿಚಾರಣೆ ಮುಂದುವರಿಯಲಿದೆ. ಆರೋಪಿಗಳಿಗೆ ಪಿಎಫ್ಐ , ಎಸ್ ಡಿಪಿಐ ಜತೆ ಸಂಪರ್ಕ ಇರುವ ಶಂಕೆ ಇದೆ. ಈ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಲಾಗುವುದು ಆದ್ದರಿಂದ ಈ ಹಂತದಲ್ಲಿ ಏನನ್ನೂ ಹೇಳಲಾಗದು. ತನಿಖಾಧಿಕಾರಿ ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವರದಿ ಸಲ್ಲಿಸಲಿದ್ದಾರೆ. ಹತ್ಯೆ ಆರೋಪಿಗಳು ಪ್ರಕರಣದ ಸಂದರ್ಭ ಹಾಗೂ ನಂತರ ಒಟ್ಟು ಐದು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರನ್ನು ಬಳಸಿದ್ದು ಅವುಗಳನ್ನು ಶೀಘ್ರವೇ ದಸ್ತಗಿರಿ ಮಾಡಲಾಗುವುದು ಎಂದು ಎಡಿಜಿಪಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಐಜಿಪಿ ದೇವ ಜ್ಯೋತಿ ರೇ, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News