ಚಾಮರಾಜಪೇಟೆ ‘ಈದ್ಗಾ ಮೈದಾನ'ದಲ್ಲಿ ಆ.15ಕ್ಕೆ ಸರಕಾರದಿಂದಲೇ ಧ್ವಜಾರೋಹಣ: ಸಚಿವ ಆರ್.ಅಶೋಕ್

Update: 2022-08-11 14:46 GMT

ಬೆಂಗಳೂರು, ಆ. 11: ‘ಇಲ್ಲಿನ ಚಾಮರಾಜಪೇಟೆ ‘ಈದ್ಗಾ ಮೈದಾನ'ದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆ.15ರಂದು ರಾಜ್ಯ ಸರಕಾರದಿಂದಲೇ ಧ್ವಜಾರೋಹಣ ನರವೇರಿಸಲಾಗುವುದು' ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ‘ಆ.15ರಂದು ಸರಕಾರದ ಪರವಾಗಿ ಉಪವಿಭಾಗಾಧಿಕಾರಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು' ಎಂದು ಸ್ಪಷ್ಟನೆ ನೀಡಿದರು.

‘ಧ್ವಜಾರೋಹಣ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರೂ ಧಾರ್ಮಿಕ ಘೋಷಣೆಗಳನ್ನು ಕೂಗುವಂತಿಲ್ಲ. ಬದಲಾಗಿ ರಾಷ್ಟ್ರದ ಕುರಿತ ಘೋಷಣೆ ಕೂಗಲು ಅವಕಾಶವಿದೆ. ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಇದೀಗ ಆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಲಾಗುವುದು' ಎಂದು ಅವರು ತಿಳಿಸಿದರು.

‘ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಾವುದೇ ಸಂಘಟನೆ ಅಥವಾ ಆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಯಾರೂ ವೈಯಕ್ತಿಕವಾಗಿ ಧ್ವಜಾರೋಹಣ ನೆರವೇರಿಸಲು ಅವಕಾಶವಿಲ್ಲ. ರಾಜ್ಯ ಸರಕಾರವೇ ಮೈದಾನದಲ್ಲಿ ದ್ವಜಾರೋಹಣ ನೆರವೇರಿಸಲಿದೆ. ಹೀಗಾಗಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲ' ಎಂದು ಅಶೋಕ್ ಸ್ಪಷ್ಟಪಡಿಸಿದರು.

‘ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಯಾವುದೇ ಕಾರಣಕ್ಕೂ ಯಾರಿಗೂ ಹಸ್ತಾಂತರ ಮಾಡಿಲ್ಲ. ಆ.15ರ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಝಮೀರ್ ಅಹ್ಮದ್ ಖಾನ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಆಹ್ವಾನಿಸಲಾಗುವುದು. ಅಲ್ಲದೆ, ಈ ಸಂದರ್ಭದಲ್ಲಿ ಮೈದಾನಕ್ಕೆ ಬಿಗಿ ಪೊಲಿಸ್ ಬಂದೋಬಸ್ತ್ ಕಲ್ಪಿಸಲಾಗುವುದು' ಎಂದು ಅಶೋಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News